ಅರಸೀಕೆರೆ: ವೀರಶೈವರು ತಮ್ಮಲ್ಲಿರುವ ಒಳಪಂಗಡಗಳನ್ನು ಮರೆತು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಮಾತ್ರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಹೇಳಿದರು.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗಮಧ್ಯೆ ವರ್ತಕ ದಂದೂರು ರವಿ ಅವರ ಮನೆಯಲ್ಲಿ ಕೆಲಕಾಲ ತಂಗಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಒಳಪಂಗಡದ ಸಂಕುಚಿತ ಮನೋಭಾವ ನಮ್ಮನ್ನು ರಾಜಕೀಯ ಅಧಿಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ನಿರಂತರ ಅನ್ಯಾಯವಾಗಲು ಕಾರಣವಾಗಿದೆ. ಆದ್ದರಿಂದ ಇನ್ನಾದರೂ ಒಳಪಂಗಡವನ್ನು ದೂರವಿಟ್ಟು ನಾವೆಲ್ಲರೂ ವೀರಶೈವರು ಎಂಬ ಒಂದೇ ಮನೋಭಾವದಿಂದ ಹೋರಾಟ ನಡೆಸುವ ಮೂಲಕ ಪ್ರಾತಿನಿಧ್ಯ ಪಡೆಯಲು ಯತ್ನಿಸಬೇಕೆಂದು ಸಲಹೆ ನೀಡಿದರು.
ನಮ್ಮಲ್ಲಿರುವ ದೌರ್ಬಲ್ಯವನ್ನು ಕೆಲವರು ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಸಾಧ್ಯತೆಯಿದ್ದು ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ. ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬರೂ ಪಣ ತೊಡಬೇಕೆಂದು ಕರೆ ನೀಡಿದರು.
Advertisement