ಪಿ.ರವಿಕುಮಾರ್
ಕನ್ನಡಪ್ರಭ ವಾರ್ತೆ ಹಾಸನ ಮಾ.6
ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಮುಖ್ಯವಾಗಿ ಕಾಂಗ್ರೆಸ್, ಜೆಡಿಎಸ್ ನಡುವೆಯೇ ಸ್ಪರ್ಧೆ ನಡೆದಿದೆ. ಉಳಿದಂತೆ ಕೆಜೆಪಿ ಎರಡರಿಂದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಒಡ್ಡಿದ್ದರೇ, ಅಧಿಕಾರರೂಢ ಬಿಜೆಪಿ ಹೋರಾಟವನ್ನು ನಿರೀಕ್ಷಿತ ರೀತಿಯಲ್ಲಿ ನೀಡುತ್ತಿಲ್ಲ. ಪಕ್ಷೇತರರು ಸುಮಾರು 10 ವಾರ್ಡ್ಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಗೆಲುವಿಗೆ ಅಡ್ಡಗಾಲು ಹಾಕಿರುವುದು ಕಂಡು ಬಂದಿದೆ. ಇಲ್ಲಿ ಪಕ್ಷೇತರರು ಎಷ್ಟರ ಮಟ್ಟಿಗೆ ಯಶಸ್ಸಿ ಆಗುತ್ತಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಉಂಟಾಗಿದೆ.
ಮಾ.7ರಂದು ನಡೆಯುವ ಚುನಾವಣೆಗೆ ಜಿಲ್ಲೆಯಲ್ಲಿ 180 ವಾರ್ಡ್ಗಳ ಪೈಕಿ ಮೂರು ವಾರ್ಡ್ಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 177 ವಾರ್ಡ್ಗಳಿಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿ ಸಜ್ಜುಗೊಂಡಿದೆ. ಹೊಳೆನರಸೀಪುರ ಪುರಸಭೆಯ 4 ಮತ್ತು 9ನೇ ವಾರ್ಡ್ಗಳು ಹಾಗೂ ಆಲೂರು ಪಟ್ಟಣ ಪಂಚಾಯ್ತಿಯ 2ನೇ ವಾರ್ಡ್ನಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 177 ವಾರ್ಡ್ಗಳಲ್ಲಿ 747 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚುಕ್ಕಾಣಿ ಹಿಡಿಯಲು ತುದಿಗಾಲಿನಲ್ಲಿ: ಹಾಸನದ ನಗರಸಭೆ, 5 ಪುರಸಭೆ, 2 ಪಟ್ಟಣ ಪಂಚಾಯ್ತಿಗಳನ್ನು ಹೊಂದಿರುವ ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ನವರು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಈ ಭಾರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯಲು ತುದಿಗಾಲಿನಲ್ಲಿ ನಿಂತಿದೆ.
ಇನ್ನೂ ಕಾಂಗ್ರೆಸ್ನವರು ಸಹ ಜಿಲ್ಲೆಯಲ್ಲಿ ಜೆಡಿಎಸ್ನ್ನು ಮಣಿಸಲು ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.
ಉಳಿದಂತೆ ಬಿಜೆಪಿ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಖಾತೆ ತೆರೆಯದೇ ನಿಯಂತ್ರಣ ಹೇರಲು ಕೆಜಿಪಿ ಅಭ್ಯರ್ಥಿಗಳು ತಮ್ಮ ಕಸರತ್ತನ್ನು ನಡೆಸಿದ್ದಾರೆ. ಇನ್ನೂ ಈ ಭಾರಿ ಅಧಿಕವಾಗಿರುವ ಪಕ್ಷೇತರ ಅಭ್ಯರ್ಥಿಗಳ ಪೈಕಿ ಕೆಲವರು ಜೆಡಿಎಸಸ್ನಿಂದ ಬಿ ಫಾರಂ ಲಭ್ಯವಾಗದ ಕಾರಣ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲೇಬೇಕು ಎಂದು ಹೆಚ್ಚಿನ ಪ್ರಯತ್ನವನ್ನು ನಡೆಸಿದ್ದಾರೆ.
2007ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಗಳಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟಬಹುಮತ ಲಭ್ಯವಾಗದೆ ಅತಂತ್ರ ಸ್ಥತಿ ನಿರ್ಮಾಣವಾಗಿತ್ತು. ಅದೇ ರೀತಿಯ ಅದರ ಹಿಂದಿನ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. 2007ರ ಚುನಾವಣೆಯಲ್ಲಿ ಜೆಡಿಎಸ್ ಇತರ ಪಕ್ಷಗಳಿಂದ ಹೆಚ್ಚಿನ ಅಭ್ಯರ್ಥಿಗಳನ್ನು ಪಡೆದರು ಸಹ ಅಧಿಕಾರ ಹಿಡಿಯಲು ಸಾಧ್ಯವಾಗುವಷ್ಟರಲ್ಲಿ ಆದ ಇದರೆ ಪಕ್ಷದ ಅಭ್ಯರ್ಥಿಗಳು ಜೆಡಿಎಸ್ಗೆ ಬಂದಿದ್ದರಿಂದ ಜೆಡಿಎಸ್ ಅಧಿಕಾರ ಹಿಡಯಲು ಸಾಧ್ಯವಾಗಿತ್ತು. ಹೊಳೆನರಸೀಪುರದಲ್ಲಿ ಎಲ್ಲಾ ಸ್ಧಾನಗಳನ್ನು ಜೆಡಿಎಸ್ನ್ನು ಬುಟ್ಟಿಗೆ ಹಾಕಿಕೊಂಡು, ಅಧಿಕಾರ ಚುಕ್ಕಾಣಿ ಹಿಡಿದಿತ್ತು.
ಹಾಗೆಯೇ ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯ್ತಿಗಳಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಈ ಭಾರೀಯ ಚುನಾವಣೆಯಲ್ಲಿ 8 ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯಲು ಎಲ್ಲಾ ರೀತಿಯ ಸರ್ಕಸ್ ನಡೆಸಿದೆ. ವಿಪರ್ಯಾಸ ಅಂದ್ರೆ ಜೆಡಿಎಸ್
ಭದ್ರಕೋಟೆಯಾಗಿರುವ ಜಿಲ್ಲೆಯನ್ನು ಛಿದ್ರಗೊಳಿಸಲು ಇತರೆ ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ.
ವಾಸವಿಲ್ಲದವರ ಹೆಸರು: ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1,04,416 ಪುರುಷ ಮತ್ತು 1,03,808 ಮಹಿಳಾ ಮತದಾರರು ಸೇರಿದಂತೆ 2,08,224 ಮತದಾರಿದ್ದಾರೆ. ಈ ಪೈಕಿ ನೀಡಲಾಗಿದ್ದ ಹೆಚ್ಚುವರಿ ಮತದಾರರ ಪಟ್ಟಿಯು ದೋಷಪೂರಿತವಾಗಿದೆ.
ನಗರ ಹಾಗೂ ಪಟ್ಟಣಗಳಲ್ಲಿ ವಾಸವಿಲ್ಲದರ ಜನರ ಹೆಸರುಗಳನ್ನು ಸೇರಿಲಾಗಿದೆ. ಹಲವು ವರ್ಷಗಳಿಂದ ಸ್ಥಳೀಯವಾಗಿ ವಾಸವಾಗಿರುವ ಮತದಾರರ ಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ಆರೋಪಿಸಿ, ಈ ಮತದಾರರ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆದಲ್ಲಿ ನ್ಯಾಯಯುತ ಚುನಾವಣೆ ಸಾಧ್ಯವಾಗುವುದಿಲ್ಲ ಎಂದು ನಾನಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಆರೋಪಿಸಿದ್ದರು. ಯಾವುದೇ ಒಂದು ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಪಡೆಯಲು ನಾನಾ ರೀತಿಯ ಅನ್ಯಮಾರ್ಗಗಳನ್ನು ಹಿಡಿದ್ದಿದ್ದರೆ ಅದನ್ನು ತಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಪೈಪೋಟಿಯಂತೆ ಎಚ್ಚೆತ್ತುಕೊಂಡು ಅಡ್ಡಮತನಗಳು, ನಖಲಿ ಮತದಾರರನ್ನು ಪತ್ತೆ ಹಚ್ಚಲು ಸ್ವಯಂ ಪ್ರೇರಿತವಾಗಿ ಮುಂದಾಗಿದ್ದಾವೆ. ಜಿಲ್ಲೆಯಲ್ಲಿ ಒಟ್ಟು 306 ಮತಗಟ್ಟೆಗಳಿದ್ದು, ಈ ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಕ್ರಮ ಮತದಾನಕ್ಕೆ ಅವಕಾಶ ಕಲ್ಪಿಸದಂತೆ ಎಲ್ಲಾ ರಾಜಕೀಯ ಪಕ್ಷಗಳು ಒತ್ತಾಯಿಸಿವೆ.
ಪಾರದರ್ಶಕ ಮತದಾನಕ್ಕೆ ಡಿಸಿ ಮನವಿ: ಜಿಲ್ಲೆಯಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರು ಪಾರದರ್ಶಕವಾಗಿ ಮತದಾನ ಮಾಡಬೇಕು. ಯಾವುದೇ ಆಮೀಷಕ್ಕೆ ಮತದಾರರು ಒಳಗಾಗದೇ ಪ್ರಾಮಾಣಿಕವಾಗಿ ಹಾಗೂ ಯಾವುದೇ ರೀತಿಯಲ್ಲಿ ಶಾಂತಿ ಕದಡದಂತೆ ಮತದಾನ ಮಾಡಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಈಗಾಗಲೇ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಮನವಿ ಮಾಡಿದ್ದಾರೆ.