ಹಾಸನ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ರಾಜ್ಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಹಾಸನ ಮತ್ತು ಜಿಲ್ಲೆಯ ವಿವಿಧ ಮಹಿಳಾ ಸಂಘಸಂಸ್ಥೆಗಳ ಸಹಯೋಗದಲ್ಲಿ ಮಾ. 8ರಂದು ನಗರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಅರಿವು ಮತ್ತು ಜಾಗೃತಿಯೆಡೆಗೆ ಮಹಿಳಾ ಹೆಜ್ಜೆ ಆಕರ್ಷಣೀಯ ಜಾಥಾವನ್ನು ಆಯೋಜಿಸಲಾಗಿದೆ. 8 ರಂದು ಶುಕ್ರವಾರ ಬೆಳಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಿಳಾ ದೌರ್ಜನ್ಯ ತಡೆ ಮತ್ತು ಜಾಗೃತಿಗಾಗಿ ಮಹಿಳಾ ಹೆಜ್ಜೆ ಜಾಥಾವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎಸ್. ಸೋಮಶೇಖರ್ ಉದ್ಘಾಟಿಸುವರು. ನಾನಾ ಮಹಿಳಾ ಸಂಘಸಂಸ್ಥೆಗಳು, ಜಿಲ್ಲೆಯ ಮಹಿಳಾ ವಕೀಲರು ಹಾಗೂ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಭಾಗವಹಿಸುವರು. ಜಾಥಾ ನಂತರ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10.30ಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಚ್.ಜಿ. ವಿಜಯಕುಮಾರಿ ಉದ್ಘಾಟಿಸುವರು. ದೀಕ್ಷಾ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ ಡಿಸಿಲ್ವ ಲಿನೆಟ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್, ಜಿಲ್ಲಾ ಎಸ್ಪಿ ಅಮಿತ್ ಸಿಂಗ್, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಚ್. ನಾಗರಾಜ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನಾಳೆ ಪ್ರತಿಷ್ಠಾಪನೆ
ಹೊಳೆನರಸೀಪುರ: ಪಟ್ಟಣದ ಕುಂಬಳೇಶ್ವರ ಕುಂಬಾರರ ಸಂಘದಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಮಾ.9 ರಿಂದ ಮಾ.12ರವರೆಗೆ ನಾಗಾಭರಣ ಪ್ರತಿಷ್ಠಾಪನೆ ಹಾಗೂ ಕುಂಬಳೇಶ್ವರಸ್ವಾಮಿ, ಬಸವಣ, ಗಣಪತಿ ದೇವರಿಗೆ ಪಂಚಾಮೃತಾಭಿಷೇಕ, ನವಗ್ರಹ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸಂಗಪ್ಪ ತಿಳಿಸಿದ್ದಾರೆ.