ಕ.ಪ್ರ. ವಾರ್ತೆ ್ಣ ಹೊಳೆನರಸೀಪುರ ್ಣ ಮಾ.10
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟದಿಂದ ಜಾಗೃತಿ ಕಾರ್ಯಕ್ರಮ ತಾಲೂಕಿನ ಹಿರೇಬೆಳಗುಲಿ ಗ್ರಾಮದಲ್ಲಿ ನಡೆಯಿತು. ಸ್ಮಾರಕ ಸಂರಕ್ಷಣೆ ಮತ್ತು ಪರಂಪರಾ ಕೂಟದ ವತಿಯಿಂದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿಗೆ ಸ್ಮಾರಕ ಸಂರಕ್ಷಣೆ ಮತ್ತು ಪರಂಪರೆಗಳ ಸಂರಕ್ಷಣೆ ಕುರಿತಂತೆ ವಿಶೇಷ ಜನ ಜಾಗೃತಿ ಮೂಡಿಸಲಾಯಿತು.
ಕಾಲೇಜು ಪ್ರಾಂಶುಪಾಲ ಹಾಗೂ ಪರಂಪರಾ ಕೂಟದ ಸಂಚಾಲಕ ಪ್ರೊ.ಎಂ.ಬಿ.ಇರ್ಷಾದ್ ವಿಶೇಷ ಉಪನ್ಯಾಸ ನೀಡಿದರು. ಹಿರೇಬೆಳಗುಲಿ ಮಲ್ಲೇಶ್ವರ ದೇವಸ್ಥಾನ ಬಲಗಡೆಯಿರುವ ವೀರಗಲ್ಲು ಶಾಸನ 12ನೇ ಶತಮಾನಕ್ಕೆ ಸೇರಿದ್ದಾಗಿದ್ದು ಹೊಯ್ಸಳ ದೊರೆ ವೀರಬಲ್ಲಾಳನ ಕಾಲದಲ್ಲಿ ಹಿರೇಬೆಳಗುಲಿ ಗ್ರಾಮ ಅಸ್ತಿತ್ವದಲ್ಲಿತ್ತು ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡುತ್ತದೆ ಎಂದು ತಿಳಿಸಿದರು.
ವೀರ ನರಸಿಂಹನ ಸೇನೆಯಲ್ಲಿದ್ದ ಕೇತಮಲ್ಲ ಎಂಬ ಸೈನಿಕನು ವೀರ ನರಸಿಂಹನು ನಡೆಸಿದ ಯುದ್ಧದಲ್ಲಿ ಹೊಯ್ಸಳ ಸೇನೆಯ ಪರವಾಗಿ ಹೋರಾಡಿ ವೀರ ಸ್ವರ್ಗ ಸೇರಿದ ಎಂಬುದರ ಬಗ್ಗೆ ಈ ವೀರಗಲ್ಲು ಶಾಸನ ಮಾಹಿತಿ ನೀಡುತ್ತದೆ ಎಂದು ಅವರು ಹೇಳಿದರು.
ಅಲ್ಲದೆ ಹಿರೇಬೆಳಗುಲಿ ಗ್ರಾಮದ ಉಲ್ಲೇಖಗಳು 12ನೇ ಶತಮಾನಕ್ಕೆ ಸೇರಿದ್ದ ವೀರಗಲ್ಲು ಶಾಸನಗಳಲ್ಲಿ ಉಲ್ಲೇಖವಾಗಿರುವುದು ಗಮನಾರ್ಹ ಸಂಗತಿ. ಈ ದಾಖಲೆಗಳ ಆಧಾರದ ಮೇಲೆ ಹೊಯ್ಸಳರ ಕಾಲದಲ್ಲಿ ಹಿರೇಬೆಳಗುಲಿ ಗ್ರಾಮ ಅಸ್ತಿತ್ವದಲ್ಲಿತ್ತು ಮತ್ತು ಇಲ್ಲಿಯ ಆಡಳಿತ ವ್ಯವಸ್ಥೆಯ ಉಸ್ತುವಾರಿಯನ್ನು ಬಲ್ಲಯ್ಯ ಡಣಾಯಕ ಎಂಬುವನು ನೋಡಿಕೊಳ್ಳುತ್ತಿದ್ದ. ತಮ್ಮಜಿಯ ಹೊನ್ನಯ್ಯಶೆಟ್ಟಿ ಎಂಬುವರು ಇಲ್ಲಿನ ವೀರಗಲ್ಲನ್ನು ಕೇತಮಲ್ಲನ ಜ್ಞಾಪಕಾರ್ಥ ಸ್ಥಾಪಿಸಲಾಗಿದೆ ಎಂಬುದಾಗಿ ತಿಳಿಸಿದರು.
ಸಂಸ್ಕೃತಿಯ ಮೇಲೆ ದಾಳಿ: ಹಿರೇಬೆಳಗುಲಿ ಗ್ರಾಮದ ಬೀದಿಗಳಲ್ಲಿ ಪರಂಪರೆಗಳ ರಕ್ಷಣೆಯ ಘೋಷಣೆಯೊಂದಿಗೆ ಸಾಗಿದ ಈ ಜಾಥಾ ನಡೆಯಿತು. ಇದೇ ಸಂದರ್ಭದಲ್ಲಿ ನಮ್ಮ ಪ್ರಾಚೀನ ಪರಂಪರೆ, ಸ್ಮಾರಕಗಳನ್ನು ರಕ್ಷಿಸಿ, ಸ್ಮಾರಕಗಳು ನಮ್ಮ ಸಂಸ್ಕೃತಿಯ ರಾಯಭಾರಿಗಳು ಎಂಬ ನಾಮ ಫಲಕಗಳೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟದ ವಿದ್ಯಾರ್ಥಿಗಳು ಹಿರೇಬೆಳಗುಲಿ ಗ್ರಾಮದಲ್ಲಿ ಪಾರಂಪರಿಕ ಸಂರಕ್ಷಣಾ ಜಾಥಾ ನಡೆಸಿದರು.
ಗ್ರಾಮದ ಮುಖಂಡರು ಶುಭ ಹಾರೈಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಕಿರಣ್ರಾವತ್ ಚಾಲನೆ ನೀಡಿದರು. ಶಿಬಿರಾಧಿಕಾರಿ ಮಧುಸೂದನ್ ಇತರ ಪ್ರಾಧ್ಯಾಪಕರು ಇದ್ದರು.