ಜೆಡಿಎಸ್ ಹ್ಯಾಟ್ರಿಕ್

Updated on: 

ಕ.ಪ್ರ.ವಾರ್ತ್ಣೆಹೊಳೆನರಸೀಪುರ ಮಾ.11.
ಇಲ್ಲಿನ ಪುರಸಭೆಯ 23ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸುವ ಮೂಲಕ ಸತತ ಮೂರನೇ ಬಾರಿಗೆ ಪುರಸಭೆ ಆಡಳಿತವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಸಫಲವಾಗಿದೆ.
ಕಳೆದ ಹತ್ತು ವರ್ಷಗಳಿಂದಲೂ ಸೋಲಿನ ಸುಳಿಯಲ್ಲಿಯೇ ಇದ್ದ ಕಾಂಗ್ರೆಸ್ ಈ ಬಾರಿ 5 ಸ್ಥಾನ ಪಡೆಯುವ ಮೂಲಕ ಮರಳಿ ಪುರಸಭೆಯ ಮೆಟ್ಟಿಲೇರಲು ಸಿದ್ದತೆ ನಡೆಸಿರುವ ಬೆನ್ನಲ್ಲೇ, ಈ ಬಾರಿ ಇಬ್ಬರು ಪಕ್ಷೇತರರು  ಜಯಗಳಿಸುವ ಮೂಲಕ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ನೀರು ಕುಡಿಸಿರುವುದು ವಿಶೇಷ. ಚುನಾವಣೆಯಲ್ಲಿ ಮತದಾರರು ಜೆಡಿಎಸ್‌ನ್ನು ಕೈಬಿಡದೆ, ಕಾಂಗ್ರೆಸ್‌ಗೆ ಕೈ ಕೊಡದೆ, ಪಕ್ಷೇತರರನ್ನೂ ಉಪೇಕ್ಷಿಸದೆ ಸರಿ ತಪ್ಪುಗಳನ್ನು ಸಮೀಕರಿಸಿ ಮತ ಚಲಾಯಿಸಿರುವುದು ಈ ಬಾರಿಯ ವಿಶೇಷ.
ಅಭಿವೃದ್ಧಿಗಾಗಿ ಜೆಡಿಎಸ್ ಅನ್ನು ಕೈಬಿಡದೆ, ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ಸನ್ನು ಮರಳಿ ಕೈಹಿಡಿದು ಉಸಿರಾಡುವಂತೆ ಮಾಡಿರುವುದು ಯಾವುದೇ ಪಕ್ಷದ ಅಭ್ಯರ್ಥಿಗಳು ಏನೇ ಕಸರತ್ತು ಮಾಡಿದರೂ ಅಂತಿಮವಾಗಿ ಅನಿರೀಕ್ಷಿತವೆನಿಸದ, ನಿರೀಕ್ಷಿತವೂ ಆಗಿರದ ಫಲಿತಾಂಶ ಇಲ್ಲಿನ ಮತದಾರ ಪ್ರಭುಗಳು ನೀಡಿದ್ದಾರೆ.
ಪುರಸಭೆಯ ಎರಡು ವಾರ್ಡ್‌ಗಳಲ್ಲಿ ಈಗಾಗಲೇ ಇಬ್ಬರು ಜೆಡಿಎಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 21ವಾರ್ಡ್‌ಗಳಲ್ಲಿನ ಮತ ಸಮರದ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿ 11ರ ಸುಮಾರಿಗೆಲ್ಲಾ ಎಲ್ಲಾ ವಾರ್ಡ್‌ಗಳ ಫಲಿತಾಂಶವು ಹೊರಬಿದ್ದಾಗಿತ್ತು.
ಮತ ಎಣಿಕೆ ಕೇಂದ್ರವಾದ ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ಸುತ್ತಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ, ಮತ ಎಣಿಕೆ ನಡೆಯುವ ದಿನವಾದ ಸೋಮವಾರ ಸಂಜೆಯವರೆವಿಗೂ 144ನೇ ಸೆಕ್ಷನ್ ವಿಧಿಸಿ, ಯಾರೂ ಗುಂಪು ಸೇರದಂತೆ ಮೊದಲೇ ಮುನ್ನೆಚ್ಚರಿಕೆ ನೀಡಿದ್ದರೂ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಪಠಾಕಿ ಸಿಡಿಸಿ ಪಟ್ಟಣದಾದ್ಯಂತ ಮೆರವಣಿಗೆ ನಡೆಸಿ ಸಂಭ್ರಮಿಸಿದರು.



23 ವಾರ್ಡ್: ಜಯಶಾಲಿಗಳ ವಿವರ


ವಾರ್ಡ್ -1. ಚಲಾಯಿಸಲಾದ ಒಟ್ಟು 677 ಮತಗಳಲ್ಲಿ ಜೆಡಿಎಸ್‌ನ ಎಂ.ಟಿ.ಶಿಲ್ಪ-305 ಮತ ಪಡೆದರೆ, ಕಾಂಗ್ರೆಸ್‌ನ ಶೋಭ 372 ಮತ ಗಳಿಸಿ ವಿಜೇತರಾದರು.
ವಾರ್ಡ್-2. 496 ಮತಗಳಲ್ಲಿ ಕಾಂಗ್ರೆಸ್‌ನ ಎಚ್.ಆರ್.ಪ್ರಕಾಶ್-53ಮತ ಗಳಿಸಿದರೆ, ಮಾಜಿ ಅಧ್ಯಕ್ಷ ಜೆಡಿಎಸ್‌ನ ಎಚ್.ಎಸ್.ಸುದರ್ಶನ್-189 ಮತಗಳಿಸಿದ್ದು, ಪಕ್ಷೇತರ ಅಭ್ಯರ್ಥಿ ರಂಗನಾಥ-254 ಮತ ಗಳಿಸಿ ಯುವ ಮತದಾರರನ್ನು ಒಗ್ಗೂಡಿಸಿ ಅಚ್ಚರಿಯ ಗೆಲವು ಸಾಧಿಸಿದ್ದಾರೆ.
ವಾರ್ಡ್ -3. ಒಟ್ಟು 618 ಮತಗಳಲ್ಲಿ ಕಾಂಗ್ರೆಸ್‌ನ ಮುಜಾಹಿದ್-235 ಮತ ಗಳಿಸಿದರೆ, ಮಾಜಿ ಅಧ್ಯಕ್ಷ ಜೆಡಿಎಸ್‌ನ ಜಿಕ್ರಿಯಾ ಅಹಮದ್ ಶರೀಫ್- 383 ಮತಗಳಿಸಿ ಪುನರಾಯ್ಕೆ ಆಗಿದ್ದಾರೆ.
ವಾರ್ಡ್ -4. ಜೆಡಿಎಸ್‌ನ ಸುಮ ಅವಿರೋಧ ಆಯ್ಕೆಗೊಂಡಿದ್ದಾರೆ. ವಾರ್ಡ್ -5. ಒಟ್ಟು 596 ಮತಗಳಲ್ಲಿ ಪಕ್ಷೇತರ ಅಭ್ಯರ್ಥಿ ಪರ್ವೀಜ್ ಅಹಮದ್-19 ಮತ ಗಳಿಸಿದರೆ, ಕಾಂಗ್ರೆಸ್‌ನ  ಕೆ.ಎಚ್.ಜಲೇಂದ್ರ-261ಮತ ಗಳಿಸಿದ್ದು, ಅಂತಿಮವಾಗಿ ಜೆಡಿಎಸ್‌ನ ಫಿರೋಜಖಾನ್-316 ಮತ ಗಳಿಸಿ ವಿಜೇತರಾಗಿದ್ದಾರೆ. ವಾರ್ಡ್ -6. ಒಟ್ಟು 493 ಮತಗಳಲ್ಲಿ ಪಕ್ಷೇತರ ಅಭ್ಯರ್ಥಿ ಮೀರ್‌ಬಾಬರ್ ಆಲಿ-182, ಅಬ್ದುಲ್‌ಮುನಾಫ್-7 ಮತ್ತು ಮಿರ್ಜಾಕಲ್ಬೇ ಹುಸೇನ್-13 ಮತ ಗಳಿಸಿದರೆ, ಕಾಂಗ್ರೆಸ್‌ನ ಇರ್ಫಾನ್ ಷರೀಫ್ ಕೇವಲ 9 ಮತ ಗಳಿಸಿ ಪರಾಭವಗೊಂಡರೆ ಜೆಡಿಎಸ್‌ನ ಮುಫೀದ್ ಆಲಿ-282 ಮತ ಗಳಿಸಿ ವಿಜಯಿಯಾಗಿದ್ದಾರೆ.
ವಾರ್ಡ್ 7 ಒಟ್ಟು 617ಮತಗಳಲ್ಲಿ ಕಾಂಗ್ರೆಸ್‌ನ ಮಹಮ್ಮದ್ ಮುಜಾಹಿದ್-303 ಮತ ಗಳಿಸಿದರೆ, ಜೆಡಿಎಸ್‌ನ ಸಲೀಂ-314 ಮತ ಗಳಿಸಿ ಅಲ್ಪ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ವಾರ್ಡ್ -8. ಒಟ್ಟು 562 ಮತಗಳಲ್ಲಿ ಬಿಜೆಪಿಯ ಪದ್ಮ-12 ಮತಗಳು, ಕಾಂಗ್ರೆಸ್‌ನ  ಎಂ.ವಿ.ರಮ್ಯಶ್ರೀ-229 ಮತ ಗಳಿಸಿದರೆ, ಜೆಡಿಎಸ್‌ನ ಎಚ್.ಆರ್.ಕಲಾವತಿ-321 ಮತಗಳಿಸಿ ವಿಜೇತರಾಗಿದ್ದಾರೆ. ವಾರ್ಡ್ -9ರಲ್ಲಿ ಜೆಡಿಎಸ್‌ನ ಎಚ್.ವಿ.ಸುರೇಶ್ ಅವಿರೋಧ ಆಯ್ಕೆಯಾಗಿದ್ದಾರೆ.
ವಾರ್ಡ್ -10. ಒಟ್ಟು 467 ಮತಗಳಲ್ಲಿ ಪಕ್ಷೇತರ ಅಭ್ಯರ್ಥಿ ಎಚ್.ವಿ.ಸುರೇಶ್‌ಕುಮಾರ್-62 ಮತಗಳಿಸಿದರೆ, ಕಾಂಗ್ರೆಸ್‌ನ ಎಂ.ಎನ್.ರಾಧಾಕೃಷ್ಣಬಾಬು-163 ಮತ ಗಳಿಸಿದ್ದು, ಜೆಡಿಎಸ್‌ನ ಹಿರಿಯ ಸದಸ್ಯ ಎ.ಆರ್.ರವಿಕುಮಾರ್-242 ಮತ ಗಳಿಸಿ ಪುನರಾಯ್ಕೆಯಾಗಿದ್ದಾರೆ. ವಾರ್ಡ್ -11. ಒಟ್ಟು 682 ಮತಗಳ ಪೈಕಿ ಜೆಡಿಎಸ್‌ನ ಬಿ.ಎಚ್.ಸುಲೋಚನ-288 ಮತಗಳಿಸಿದರೆ, ಪಕ್ಷೇತರ ಅಭ್ಯರ್ಥಿ ಸರಸ್ವತಿ-393 ಮತ ಗಳಿಸಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ.
ವಾರ್ಡ್ 12. ಒಟ್ಟು 379 ಮತಗಳ ಪೈಕಿ ತೀವ್ರ ಪೈಪೋಟಿ ನೀಡುವ ನೀರೀಕ್ಷೆ ಹುಟ್ಟಿಸಿದ್ದ ಪಕ್ಷೇತರ ಅಭ್ಯರ್ಥಿ ಎಂ.ಎಸ್.ಶಾಂತರಾಜ್-95 ಮತ ಗಳಿಸಲು ಶಕ್ತರಾದರೆ, ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಕೆ.ಪ್ರಶಾಂತ್-62 ಮತ ಗಳಿಸಿ, ಜೆಡಿಎಸ್‌ನ ಕೆ.ಆರ್.ಸುಬ್ರಹ್ಮಣ್ಯ-222 ಮತ ಗಳಿಸಿ ಪುನರಾಯ್ಕೆ ಹೊಂದಿದ್ದಾರೆ. ವಾರ್ಡ್  -13. ಒಟ್ಟು 967 ಮತಗಳ ಪೈಕಿ ಪಕ್ಷೇತರ ಅಭ್ಯರ್ಥಿ ಪರಮೇಶ-317 ಮತಗಳಿಸಿದರೆ, ಜೆಡಿಎಸ್‌ನ ಸ್ವಾಮಿ-650 ಮತ ಗಳಿಸಿ ಇಡೀ ಪುರಸಭೆಯ ಎಲ್ಲ ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚಿನ 333 ಮತಗಳ ಅಂತರದಿಂದ ವಿಜಯಿಯಾದ ಮೊದಲ ಅಭ್ಯರ್ಥಿ ಆಗಿದ್ದಾರೆ.
ವಾರ್ಡ್ 14. ಒಟ್ಟು 890 ಮತಗಳ ಪೈಕಿ ಪಕ್ಷೇತರ ಅಭ್ಯರ್ಥಿ ಎಚ್.ಡಿ.ಕೇಶವಮೂರ್ತಿ -50 ಮತ ಗಳಿಸಿದರೆ, ಕಾಂಗ್ರೆಸ್‌ನ ಎಚ್.ಆರ್.ಕಿರಣಕುಮಾರ್-287 ಮತ ಗಳಿಸಿ, ಜೆಡಿಎಸ್‌ನ ಎಚ್.ಸಿ.ಬಸವರಾಜ್-553 ಮತ ಗಳಿಸುವ ಮೂಲಕ ವಿಜಯಿಯಾಗಿದ್ದಾರೆ. ವಾರ್ಡ್ -15. ಒಟ್ಟು 413 ಮತಗಳ ಪೈಕಿ ಕಾಂಗ್ರೆಸ್‌ನ ಶಶಿಕಲ-148 ಮತ ಗಳಿಸಿದರೆ, ಜೆಡಿಎಸ್‌ನ ಎನ್.ಲಕ್ಷ್ಮೀ-265 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ವಾರ್ಡ್ -16. ಒಟ್ಟು 685 ಮತಗಳ ಪೈಕಿ ಬಿಜೆಪಿಯ ಎನ್.ಸಿ.ಸರಸ್ವತಿ-17 ಮತ ಗಳಿಸಿ, ಕಾಂಗ್ರೆಸ್‌ನ ಎಂ.ರೇಖ-191ಮತ ಪಡೆದರೆ, ಪುರಸಭೆ ಮಾಜಿ ಸದಸ್ಯ ಎಚ್.ಜೆ.ಕುಮಾರ್ ಪತ್ನಿ ಜೆಡಿಎಸ್‌ನ ತುಳಸಿ-477ಮತಗಳಿಸಿ ವಿಜೇತರಾಗಿದ್ದಾರೆ.
ವಾರ್ಡ್ 17. ಸಾಕಷ್ಟು ಕುತೂಹಲ ಮೂಡಿಸಿದ್ದ ಹಾಗೂ ಪಟ್ಟಣ ಪುರಸಭೆಯಲ್ಲಿಯೇ ಅತಿ ದೊಡ್ಡ ವಾರ್ಡಾದ 17ನೇ ವಾರ್ಡಿನಲ್ಲಿ ಚಲಾಯಿಸಲಾದ ಒಟ್ಟು 2220 ಮತಗಳ ಪೈಕಿ ಬಿಜೆಪಿಯ ಎನ್.ಯೋಗಾನರಸಿಂಹ-41ಮತ, ಪಕ್ಷೇತರ ಅಭ್ಯರ್ಥಿ ಪಿ.ಆರ್.ಮೋಹನ್-79 ಮತ ಗಳಿಸಿದರೆ, ಕಾಂಗ್ರೆಸ್‌ನ  ಕೆ.ಆರ್.ಸುದರ್ಶನ್ ಕುಮಾರ್‌ಬಾಬು-913 ಮತ ಗಳಿಸಿದರೆ, ಅಂತಿಮವಾಗಿ ಜೆಡಿಎಸ್‌ನ ಎಚ್.ವಿ.ಪುಟ್ಟರಾಜು-1187 ಮತ ಗಳಿಸುವ ಮೂಲಕ ಸತತ ಮೂರನೇ ಬಾರಿಗೆ ಪುರಸಭೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
ವಾರ್ಡ್ -18. ಒಟ್ಟು 542 ಮತಗಳ ಪೈಕಿ ಕಾಂಗ್ರೆಸ್‌ನ ಎಚ್.ಎನ್.ಗಿರೀಶ್-148 ಮತ ಗಳಿಸಿದರೆ, ಯುವ ವಕೀಲ ಜೆಡಿಎಸ್‌ನ ಎ.ಶ್ರೀಧರ್-394 ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ.
ವಾರ್ಡ್ 19. ಅನಿರೀಕ್ಷಿತ ಫಲಿತಾಂಶದ ಮೂಲಕ ಚಲಾವಣೆಯಾದ ಒಟ್ಟು 669 ಮತಗಳಲ್ಲಿ ಮಾಜಿ ಉಪಾಧ್ಯಕ್ಷೆ ಜೆಡಿಎಸ್‌ನ ಹೇಮಶ್ರೀ ಅವರನ್ನು ಮಣಿಸಿರುವ ಕಾಂಗ್ರೆಸ್‌ನ ಹೊಸ ಮುಖ ಯು.ಆರ್.ಚೈತ್ರ-333 ಮತ ಗಳಿಸಿ ಮೂದಲ ಬಾರಿಗೆ ಪುರಸಭೆಗೆ ಆಯ್ಕೆಯಾದರೆ, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಬಿಜೆಪಿಯ ಅಭ್ಯರ್ಥಿ ಜ್ಯೋತಿ-19 ಮತಗಳಿಸಿ ಸೋಲುಂಡಿದ್ದಾರೆ. ವಾರ್ಡ್ -20. ಒಟ್ಟು 787 ಮತಗಳ ಪೈಕಿ ಕೆಜೆಪಿಯ ಎಂ.ಎ.ಲಕ್ಷ್ಮೀಕುಮಾರಿ-2, ಬಿಎಸ್‌ಆರ್ ಪಕ್ಷದ ಎಚ್.ಪಿ.ನಾಗರತ್ನ-3, ಬಿಜೆಪಿಯ ಎಚ್.ವಿ.ಶಿವಮ್ಮ-15, ಪಕ್ಷೇತರ ಅಭ್ಯರ್ಥಿ  ಬಿ.ಎಸ್.ಆಶಾರಾಣಿ-19 ಮತಗಳಿಸಿದರೆ, ಜೆಡಿಎಸ್‌ನ ಮಮತಜವರೇಶ-358 ಮತ ಗಳಿಸಿದ್ದು, ಅಂತಿಮವಾಗಿ ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಎಚ್.ಆರ್.ನಾರಾಯಣ್ ಪತ್ನಿ ಕೆ.ಎಸ್.ಸುಮಿತ್ರಾದೇವಿ-390 ಮತಗಳಿಸುವ ಮೂಲಕ ಜಯ ಗಳಿಸಿದ್ದಾರೆ.
ವಾರ್ಡ್  -21. ಇಲ್ಲಿನ ಒಟ್ಟು 731ಮತಗಳ ಪೈಕಿ ಕೆಜೆಪಿಯ ಎಚ್.ಎಂ.ಕೇಶವಮೂರ್ತಿ-6, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸದಸ್ಯ ಲಕ್ಷ್ಮಣ-303 ಮತ ಗಳಿಸಿದರೆ, ಪುರಸಭೆ ಮಾಜಿ ಸದಸ್ಯ ಕಾಂಗ್ರೆಸ್‌ನ ಎಚ್.ಎನ್.ರಾಘವೇಂದ್ರ-422 ಮತ ಗಳಿಸಿ ಬಹು ವರ್ಷಗಳ ನಂತರ ಮತ್ತೊಮ್ಮೆ ಪುರಸಭೆಗೆ ಆಯ್ಕೆಯಾಗಿದ್ದಾರೆ. ವಾರ್ಡ್ -22. ಒಟ್ಟು 771ಮತಗಳ ಪೈಕಿ ಮಾಜಿ ಸದಸ್ಯೆ ಜೆಡಿಎಸ್‌ನ ಗೌರಮ್ಮ-356 ಮತ ಗಳಿಸಿದರೆ, ಕಾಂಗ್ರೆಸ್‌ನ  ಜಯಕಾಂತಮ್ಮ-415 ಮತ ಗಳಿಸಿ ಮೊದಲ ಬಾರಿಗೆ ಪುರಸಭೆಗೆ ಆಯ್ಕೆಯಾಗಿದ್ದಾರೆ. ವಾರ್ಡ್ -23. ಪುರಸಭೆಯ ಕೊನೆಯ ವಾರ್ಡಾದ ಈ ವಾರ್ಡಿನಲ್ಲಿ ಚಲಾವಣೆಯಾದ ಒಟ್ಟು 847ಮತಗಳ ಪೈಕಿ ಕಾಂಗ್ರೆಸ್ ಎಚ್.ಆರ್.ಮಂಜುನಾಥ್-390 ಮತ ಗಳಿಸಿದರೆ, ಜೆಡಿಎಸ್‌ನ ಎಚ್.ಕೆ.ರಘುರಾಮ್-457 ಮತ ಗಳಿಸಿ ಮತ್ತೊಮ್ಮೆ ಪುರಸಭೆಗೆ ಆಯ್ಕೆಯಾಗಿದ್ದಾರೆ.


ಪಕ್ಷಗಳ ಬಲಾಬಲ


ಒಟ್ಟು ಸ್ಥಾನಗಳು    23
ಜೆಡಿಎಸ್    16
ಕಾಂಗ್ರೆಸ್    05
ಪಕ್ಷೇತರರು    02


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com