ಕ.ಪ್ರ.ವಾರ್ತೆ ಟಿ ಹಾಸನ ಟಿ ಮಾ.17
ಅಜ್ಞಾನಕ್ಕೆ ಜ್ಞಾನದೆಡೆಗೆ, ಅನಕ್ಷರತೆಯನ್ನು ಹೊಗಲಾಡಿಸುವಂತಹ ಕೆಲಸವಾಗಬೇಕು ಎಂದು ಕೊಳ್ಳೆಗಾಲದ ಮನೋರಕಿತ ಬಂತೇಜಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಡಿ.ಎಸ್. ದೇವರಾಜು ಅವರ ಅನುವಾದಿತ ಕೃತಿ ಮಹಾ ಬೌದ್ಧ ದೀಕ್ಷಾ ಭಾಷಣಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಗೌತಮ ಬುದ್ಧನ ವಿಚಾರಧಾರೆಗಳನ್ನು ಆಳವಾಗಿ ಅಧ್ಯಯನ ಮಾಡಿ ಪ್ರಬುದ್ಧತೆ ಪಡೆದುಕೊಂಡರು. ಅಂಬೇಡ್ಕರ್ ದೇಶ ಕಂಡ ಮಹಾನ್ ಪುರುಷರಲ್ಲಿ ಒಬ್ಬರು ಎಂದು ಅವರು ತಿಳಿಸಿದರು.
ಶ್ಲಾಘನೆ: ಅಂಬೇಡ್ಕರ್ ಬೌದ್ಧ ಧರ್ಮದ ದೀಕ್ಷೆ ಪಡೆಯುವಾಗ ಶೀಲ, ಸಮಾದಿ ಹಾಗೂ ಪ್ರಜ್ಞೆಯನ್ನು ಲಾಂಛನವಾಗಿ ಸ್ವೀಕರಿಸಿದರು. ಅಜ್ಞಾನಕ್ಕೆ ಜ್ಞಾನ ಕೊಡುವ ಕಾರ್ಯವಾಗಬೇಕು, ನೈತಿಕತೆ ಇಲ್ಲದಿದ್ದಲ್ಲಿ ಅಂತಹ ಮನುಷ್ಯ ಅತ್ಯಂತ ದುರ್ಬಲನಾಗುತ್ತಾನೆ. ಶೀಲವಿಲ್ಲದ ಮನುಷ್ಯ ಪರಿಮಳವಿಲ್ಲದ ಹೂವಿನಂತೆ ಎಂದ ಅವರು, ಅಂಬೇಡ್ಕರ್ ಅವರ ಮಹಾಬೌದ್ಧ ದೀಕ್ಷಾ ಭಾಷಣವನ್ನು ಅನುವಾದಿಸುವಂತಹ ಕಷ್ಟಕರವಾದ ಕೆಲಸವನ್ನು ಮಾಡಿರುವ ಲೇಖಕರ ಶ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಸಾಹಿತಿ ನಟರಾಜ್ ಬೂದಾಳ್, ಕೃತಿಗಾರ ಬಿ.ಎಸ್. ದೇವರಾಜ್, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆತ್ತೂರು ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.