ಕ.ಪ್ರ. ವಾರ್ತೆ ಹಾಸನ ಮಾ. 29
ನಗರದ ವೇದ ಭಾರತಿ ಸಂಸ್ಥೆಯಿಂದ 5 ರಿಂದ 9ನೇ ತರಗತಿ ಮಕ್ಕಳಿಗಾಗಿ 10 ದಿನಗಳ ವಿಶೇಷ ಬಾಲ ಸಂಸ್ಕಾರ ಶಿಬಿರವನ್ನು ರವೀಂದ್ರ ನಗರದ ರಾಮಕೃಷ್ಣ ವಿದ್ಯಾಲಯದಲ್ಲಿ ಏಪ್ರಿಲ್ 7 ರಂದು ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 9-30ಕ್ಕೆ ಶಿಬಿರವನ್ನು ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲ ಸಿ.ಎಸ್. ಕೃಷ್ಣಸ್ವಾಮಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವೇದಾಧ್ಯಾಯಿ ವಿಶ್ವನಾಥ ಶರ್ಮಾ ಬೇಲೂರು ಇವರು ಭಾಗವಹಿಸುವರು.
ಶಿಬಿರದಲ್ಲ್ಲಿ 40 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದೆ. ಯಾವುದೇ ಜಾತಿ ಮತ ಭೇದವಿಲ್ಲದೆ ಮೊದಲು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.
ಏಪ್ರಿಲ್ 11 ಯುಗಾದಿ ಹಬ್ಬದ ನಿಮಿತ್ತ ಶಿಬಿರಕ್ಕೆ ಬಿಡುವು ಇದ್ದು, ಉಳಿದ ದಿನಗಳಲ್ಲಿ ಪ್ರತಿ ನಿತ್ಯ ಬೆಳಗ್ಗೆ 9.30 ರಿಂದ 12.30 ರವರೆಗೆ ಮಕ್ಕಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ವೇದ ಮಂತ್ರಗಳು, ದೇವ ಸ್ತುತಿ ಪ್ರಾರ್ಥನೆ, ಶಾಂತಿ ಮಂತ್ರಗಳು, ಗಣೇಶ ಸೂಕ್ತಗಳ ಕಲಿಕೆ, ದೇಶ ಭಕ್ತರ, ಸಾಧು-ಸಂತರ, ಮಹಾತ್ಮರ ಕುರಿತ ನೀತಿ ಕಥೆಗಳು, ದೇಶ ಭಕ್ತಿ ಗೀತೆಗಳ ಕಲಿಕೆ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅನಾವರಣಕ್ಕೆ ಅವಕಾಶ ಜೊತೆಗೆ ಚರ್ಚೆ, ಆಶು ಭಾಷಣ, ಸಂವಾದಗಳು, ಮಕ್ಕಳ ದೈಹಿಕ, ಬೌದ್ಧಿಕ ಬೆಳವಣಿಗೆಗೆ ಪೂರಕ ಆಟಗಳು, ಸಂಸ್ಕಾರ ಉತ್ತಮ ನಾಗರಿಕರಾಗಲು, ಗುರು ಹಿರಿಯರನ್ನು ಗೌರವಿಸುವ ಮನೋಭಾವಕ್ಕೆ ಒತ್ತು ನೀಡುವುದು ಈ ಶಿಬಿರದ ವೈಶಿಷ್ಟ್ಯಗಳಾಗಿವೆ. ಏ. 7 ರಂದು ಬೆಳಗ್ಗೆ 9.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭ ಮತ್ತು ಏ. 17 ರಂದು ಬೆಳಗ್ಗೆ 9.30 ಕ್ಕೆ ನಡೆಯುವ ಸಮಾರೋಪ ಸಮಾರಂಭಗಳಲ್ಲಿ ಪೋಷಕರು ಸಹ ಹಾಜರಿರಬೇಕು.