ಕ.ಪ್ರ. ವಾರ್ತೆ ಹಾಸನ ಮಾ. 29
ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಬೇಲೂರು ಕ್ಷೇತ್ರ ಶಾಸಕ ವೈ.ಎನ್. ರುದ್ರೇಶ್ಗೌಡರಿಗೆ ಟಿಕೆಟ್ ತಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಗೌಡರ ಬದಲಿಗೆ ದಶಕಗಳಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತಿರುವ ವೀರಶೈವ ಸಮಾಜದ ಚಂದ್ರಕಲಾ ಅವರಿಗೆ ಟಿಕೆಟ್ ಸಿಗುವ ಸಂಭವವಿದೆ. ಈ ನಡುವೆ ಹಾಸನ ಕ್ಷೇತ್ರದಿಂದ ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್ಗೆ ಟಿಕೆಟ್ ಸಿಗುವ ಲಕ್ಷಣಗಳಿದ್ದು, ಮತ್ತೊಬ್ಬ ಪ್ರಬಲ ಆಕಾಂಕ್ಷಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ಸಕಲೇಶಪುರ ಮೀಸಲು ಕ್ಷೇತ್ರದಿಂದ ಮಾಜಿ ಶಾಸಕ ಡಿ. ಮಲ್ಲೇಶ್ ಬದಲಿಗೆ ಜಿಪಂ ಮಾಜಿ ಸದಸ್ಯ ಡಿ. ಸಿ. ಸಣ್ಣಸ್ವಾಮಿ ಅವರಿಗೆ ಸಿಗುವ ಛಾನ್ಸ್ ಇದೆ. ಏತನ್ಮಧ್ಯೆ ಈ ಕ್ಷೇತ್ರದಿಂದ ಸ್ಪರ್ಧಿಸಲು ದೆಹಲಿಯಲ್ಲಿ ಮೊಕ್ಕಾಂ ಮಾಡಿರುವ ಮಾಜಿ ಸಚಿವೆ ಮೋಟಮ್ಮ, ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವಾಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೈಕಮಾಂಡ್ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದು, ಈ ಕಾರಣದಿಂದ ಟಿಕೆಟ್ ನೀಡುವುದಿಲ್ಲ.
ಬಿಜೆಪಿ ನಡೆಸಿದ ಆಪರೇಷನ್ ಕಮಲ ಸುತ್ತ ಒಂದು ಸುತ್ತನ್ನು ಅರಕಲಗೂಡು ಕ್ಷೇತ್ರದ ಹಾಲಿ ಶಾಸಕ ಎ.ಮಂಜು ಹಾಕಿದರೆಂದು ಕೆಲ ಕಾಂಗ್ರೆಸ್ಸಿಗರೇ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಮಂಜು ಅವರು ಟಿಕೆಟ್ಪಡೆಯಲು ಹರಸಾಹಸ ಪಡಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಂಥವರಿಗೆ ಸಿಗುತ್ತದೆ, ಸಿಗುವುದಿಲ್ಲ ಎಂದು ನೂರಕ್ಕೆ ನೂರರಷ್ಟು ಹೇಳಲಾಗದಿದ್ದರೂ, ಏಪ್ರಿಲ್ 5 ರ ನಂತರವೇ ಅಧಿಕೃತ ಅಭ್ಯರ್ಥಿಗಳ ಹೆಸರು ಪ್ರಕಟವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.