ಹಾಸನ: ಬರವನ್ನೇ ಅಪ್ಪಿಕೊಂಡಿರುವ ಅರಸೀಕೆರೆ ವಿಧಾನಸಭಾ ಕ್ಷೇತ್ರದ ರಾಜಕಾರಣ ಗೊಂದಲದ ಗೂಡು. ಮಳೆರಾಯನ ಮುನಿಸು ಸಹಿಸಿಕೊಂಡೇ ಬದುಕಿನ ತೇರನ್ನು ಎಳೆಯುತ್ತಾರೆ ಇಲ್ಲಿನ ಮತದಾರ ಪ್ರಭುಗಳು. ಕಲ್ಪತರು ನಾಡು ಎಂಬ ಪ್ರಸಿದ್ಧಿಗೀಗ ಬರ ಕಡಿವಾಣ ಹಾಕಿದೆ. ಇಲ್ಲಿನ ರಾಜಕಾರಣ ಒಂದು ರೀತಿಯಲ್ಲಿ ಗೊಂದಲದ ಗೂಡಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ದಿನಗಳು ಉರುಳಿದಂತೆ ಜನತಾದಳದ ಕೋಟೆಯಾಗಿ ಪರಿವರ್ತನೆಗೊಳ್ಳುತ್ತಿದೆ.
ಇದಕ್ಕೆ ಕಾರಣ ಕಾಂಗ್ರೆಸ್ ಮುಖಂಡರಲ್ಲಿರುವ ಸಂಘಟನೆ ಕೊರತೆ ಮತ್ತು ಪಕ್ಷ ನಿಷ್ಠೆಯ ಅಭಾವ. ಕ್ಷೇತ್ರ ಪುನರ್ವಿಂಗಡನೆ ಪರಿಣಾಮ ಗಂಡಸಿ ವಿಧಾನಸಭಾ ಕ್ಷೇತ್ರ ಹೋಗಿ, ಗಂಡಸಿ ಹೋಬಳಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತು.
ಪ್ರಚಂಡ ಬಹುಮತದಿಂದ: ಹೀಗಾಗಿ ಗಂಡಸಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡರ ರಾಜಕೀಯ ಕಾರ್ಯಕ್ಷೇತ್ರ ಅರಸೀಕೆರೆಗೆ ವರ್ಗಾವಣೆಗೊಂಡಿತು. ಎಂಟ್ರಿ ಕೊಡುತ್ತಿದ್ದಂತೆ 2008 ರಲ್ಲಿ ನಡೆದ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌಡರು ಪ್ರಚಂಡ ಬಹುಮತದಿಂದ ಪ್ರಥಮ ಬಾರಿಗೆ ಪ್ರವೇಶ ಮಾಡಿದರು.
1978 ರಿಂದ 2008 ರವರೆಗೆ ನಡೆದ 8 ವಿಧಾನಸಭೆ ಚುನಾವಣೆಗಳಲ್ಲಿ 4 ಬಾರಿ ಕಾಂಗ್ರೆಸ್, ಮೂರು ಬಾರಿ ಜನತಾದಳ, ಒಂದು ಬಾರಿ ಬಿಜೆಪಿ ಗೆದ್ದಿದೆ. ಇದು ವೀರಶೈವರ ಪ್ರಾಬಲ್ಯ ಇರುವ ಕ್ಷೇತ್ರ. ಆದರೂ ಒಕ್ಕಲಿಗ ಸಮಾಜದ ಶಿವಲಿಂಗೇಗೌಡರು ಅತ್ಯಧಿಕ ಓಟು ಪಡೆದು ಗೆದ್ದಿದ್ದು ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿತ್ತು. ಹೀಗೆ ಪ್ರಥಮ ಬಾರಿಗೆ ಭಾರಿ ಗೆಲುವು ಪಡೆದಿದ್ದ ಶಿವಲಿಂಗೇಗೌಡರೇ 2013 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. 2009 ರಲ್ಲಿ ನಡೆದ ಹಾಸನ ಲೋಕಸಭೆಯಲ್ಲಿ 3 ನೇ ಸ್ಥಾನ ಮತ್ತು 2008 ರಲ್ಲಿ ನಡೆದ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದು ಸೋತಿದ್ದ ಮಾಜಿ ಸಚಿವ ಬಿ. ಶಿವರಾಂ ಅವರಿಗೆ ಕಾಂಗ್ರೆಸ್ ಟಿಕೆಟ್ ಎಂದು ಹೇಳಲಾಗುತ್ತಿದೆ.
ಕೊಡುಗೈ ದಾನಿಯೆಂದೇ ಹೆಸರಾದ ಉದ್ಯಮಿ ಜೆಪಿಎನ್ ಜಯಣ್ಣ ಕೂಡಾ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹಿಂದುಳಿದ ವರ್ಗದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಹೆಚ್ಚಾಗಿದೆ. ವೀರಶೈವರ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕೆಜೆಪಿಯಿಂದ ಸ್ಪರ್ಧಿಸಲು ಅನೇಕರು ಮುಂದಾಗಿದ್ದಾರೆ.
ಅಭ್ಯರ್ಥಿಗಳದ್ದೇ ಚಿಂತೆ: ಜೆಡಿಎಸ್ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಆದರೆ ಕಾಂಗ್ರೆಸ್, ಕೆಜೆಪಿ, ಬಿಜೆಪಿಯಲ್ಲಿ ತಮ್ಮಲ್ಲಿ ಯಾರಿಗೆ ಪ್ರಬಲ ಶಿವಲಿಂಗೇಗೌಡರನ್ನು ಸೋಲಿಸುವ ಸಾಮರ್ಥ್ಯ ಇದೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಇದರಿಂದಾಗಿ ಕಾಂಗ್ರೆಸ್, ಬಿಜೆಪಿ, ಕೆಜೆಪಿ ಪಕ್ಷಗಳ ರಾಜಕಾರಣದಲ್ಲಿ ಗೊಂದಲ ಉಂಟಾಗಿ, ಇಂಥವರೇ ಅಭ್ಯರ್ಥಿ ಎಂದು ಹೇಳಲು ಆಗುತ್ತಿಲ್ಲ. ಇದು ಕೂಡ ಮತದಾರರಿಗೆ ಗೊಂದಲಕ್ಕೆ ಈಡು ಮಾಡಿದೆ. ಜೆಡಿಎಸ್ ವಿರುದ್ಧ ಇತರೇ ಪಕ್ಷಗಳಿಂದ ಯಾರು ಅಭ್ಯರ್ಥಿಗಳಾಗುತ್ತಾರೆ. ಅಭ್ಯರ್ಥಿಯಾಗುವ ಸಾಮರ್ಥ್ಯ ಯಾರಿಗೆ ಇದೆ ಎಂಬ ಪ್ರಶ್ನೆಯೂ ಮತ ಬಾಂಧವರನ್ನು ಕಾಡುತ್ತಿದೆ.
ಹೈಕಮಾಂಡ್ ಮೇಲೆ ಒತ್ತಡ: ಕಾಂಗ್ರೆಸ್‌ನಿಂದ ಮಾಜಿ ಶಿವರಾಂ ಟಿಕೆಟ್ ನೀಡಿದರೇ ಜೆಡಿಎಸ್ ಅಭ್ಯರ್ಥಿಗೆ ಪ್ರಬಲ ಸ್ಪರ್ಧೆ ನೀಡಬಲ್ಲರು ಎಂದು ಹೇಳಲಾಗುತ್ತಿದೆ. ಇದಕ್ಕೆ ಕ್ಷೇತ್ರದ ಕೆಲ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದು, ಉದ್ಯಮಿ ಜಯಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುತ್ತಿದೆ.ಮಾಜಿ ಶಾಸಕ ಡಿ. ಬಿ. ಗಂಗಾಧರಪ್ಪನವರ ಪುತ್ರ ಡಾ. ಲೋಕೇಶ್‌ಗೆ ಕೆಜೆಪಿ ಟಿಕೆಟ್ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದೆ. ಚಿತ್ರ ನಟ ದೊಡ್ಡಣ್ಣ ಕೂಡಾ ಕೆಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಟಿಕೆಟ್ ಸಿಗುವ ಖಾತರಿ ಇಲ್ಲ. ಬಿಜೆಪಿಯಿಂದ ಹಾರನಹಳ್ಳಿ ಸಿದ್ದಪ್ಪ, ತಾಲೂಕು ಪಂಚಾಯ್ತಿ ಸದಸ್ಯ ಬಿ.ಆರ್. ಜಯಣ್ಣ ಸ್ಪರ್ಧಿಸಲು ಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದ ನಂತರ ಬಿಜೆಪಿ ಸಾಂಕೇತಿಕ ಹೋರಾಟ ನೀಡುವ ಮಟ್ಟಕ್ಕೆ ಕುಸಿದಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ತೆಂಗನ್ನು ಹೆಚ್ಚಾಗಿ ಬೆಳೆದರೂ, ಅರಸೀಕೆರೆ ವಿಧಾನಸಭಾ ಕ್ಷೇತ್ರ ಬಯಲುಸೀಮೆಯ ಬರದ ಬೀಡು. ಇಡೀ ತಾಲೂಕಿನ ಜನತೆ ಕಳೆದ ಹಲವು ವರ್ಷಗಳಿಂದಲೂ ಫ್ಲೋರೈಡ್‌ಯುಕ್ತ ನೀರು ಸೇವಿಸಿ ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇದೀಗ ಹೇಮಾವತಿ ಮತ್ತು ಯಗಚಿ ಜಲಾಶಯಗಳಿಂದ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ನೂರಾರು ಕೋಟಿ ರು. ವೆಚ್ಚದಲ್ಲಿ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇಂಥ ಹಲವಾರು ಜನಪರ ಕೆಲಸ ಮಾಡಿರುವ ಹಾಲಿ ಶಾಸಕ ಶಿವಲಿಂಗೇಗೌಡ ಅವರಿಗೆ ಮತ್ತೊಮ್ಮೆ ಶಾಸಕನಾಗುವ ಕನಸು - ಆಸೆಗೆ ಅನುಕೂಲವಾಗಲಿದೆ. ಇಲ್ಲೂ ಕಾಂಗ್ರೆಸ್ ಜೆಡಿಎಸ್ ನಡುವೆಯೇ ನೇರ ಪೈಪೋಟಿ ಏರ್ಪಡುವ ಸಂಭವ ಇದೆ. ಇನ್ನು ಬಿಜೆಪಿ ಬಲ ಕುಂದಿಸಿರುವ ಕೆಜೆಪಿ, ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಮತಬುಟ್ಟಿಗೆ ಕೈ ಹಾಕಬಹುದು ಅಷ್ಟೆ.