ಹಾಸನ: ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಜಿಲ್ಲೆಯ ಜನತೆ ಶುಕ್ರವಾರ ಆಚರಿಸಿದರು.
ನಗರದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆದವು. ಅಲ್ಲದೇ ನಾಗರ ಕಲ್ಲುಗಳಿಗೆ ಹತ್ತಿ ಹಾರ ಧಾರಣೆ ಮಾಡಿ, ಹಾಲು ಎರೆಯುವ ಮೂಲಕ ಭಕ್ತಿ ಭಾವದಿಂದ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ನಾಗರಾಜನಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಜಾವಗಲ್: ಹಬ್ಬಗಳ ಪ್ರಾರಂಭ ಮಾಸವಾದ ಶ್ರಾವಣ ಮಾಸದ ಶುದ್ಧ ಪಂಚಮಿ ನಾಗರ ಪಂಚಮಿಯಾಗಿದ್ದು, ಅರಸೀಕೆರೆ ತಾಲೂಕು ಜಾವಗಲ್ನಲ್ಲಿ ವಿವಿಧ ಸಮಾಜದವರು ನಾಗರ ಪಂಚಮಿ ಹಬ್ಬವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಿದರು.
ಭಕ್ತರು ನಾಗರ ಕಲ್ಲಿನ ದೇವಾಲಯಕ್ಕೆ ಮುಂಜಾನೆ ಹೋಗಿ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ಪುಷ್ಪಾಲಂಕಾರ ಮಾಡಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿದರು.
ದೇಗುಲದ ಆವರಣದಲ್ಲಿರುವ ತಾವರೆ ಮರದ ಸುತ್ತಲೂ ಆವೃತಗೊಂಡಿರುವ ಹುತ್ತಕ್ಕೆ ಪೂಜೆ ಮಾಡಿ, ತನಿ ಎರೆದು, ಹಣ್ಣು ಹಂಪಲುಗಳು, ತೆಂಗಿನಕಾಯಿ, ಚಿಗಲಿ ತಂಬಿಟ್ಟು, ತಳಿಗೆ, ಕಿಚಡಿಗಳನ್ನು ದೇವರಿಗೆ ಅರ್ಪಿಸಿ ನಂತರ ಪರಸ್ಪರ ನಾಗರ ಪಂಚಮಿಯ ಶುಭಾಶಯ ಕೋರಿ ಸಹೋದರಿಯರಿಗೆ ಅರಿಶಿಣದ ದಾರ ಕಟ್ಟಿದರು. ನಂತರ ಸಹಭೋಜನ ನಡೆಸಿದರು.
ಸಹೋದರ ಸಹೋದರಿಯರ ಹಬ್ಬವೆಂದು ವಿಶೇಷವಾಗಿ ಆಚರಿಸುವ ವಾಡಿಕೆ ಇದೆ. ಕೆಲವರು ಹುತ್ತಕ್ಕೆ ಹೋಗಿ ತನಿ ಎರೆದು ಹಬ್ಬ ಮಾಡಿಕೊಂಡು ಬರುತ್ತಾರೆ.