ಹಾಸನ: ಬರಪರಿಹಾರ ಕಾಮಗಾರಿಯನ್ನು ಸಕಾಲದಲ್ಲಿ ನಿರ್ವಹಿಸದ ನೀರಾವರಿ ಮತ್ತು ಚೆಸ್ಕಾಂ ಇಲಾಖೆಗಳ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ತರಾಟೆಗೆ ತೆಗೆದುಕೊಂಡದರು.
ನಗರದ ಜಿಲ್ಲಾಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರ ಇದ್ದಂತಹ ಸಂದರ್ಭದಲ್ಲಿ ತುರ್ತಾಗಿ ಬರಪರಿಹಾರ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬದಲಾಗಿ ಮಳೆಗಾಲದಲ್ಲಿ ಪೂರ್ಣಗೊಳಿಸಿದರೆ ಪ್ರಯೋಜನವೇನು. ಬರಗಾಲದಲ್ಲಿ ಜನರಿಗೆ ಕುಡಿಯುವ ನೀರನ್ನು ಒದಗಿಸದೆ ಈಗ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳುತ್ತಿರುವುದರಿಂದ ಅಧಿಕಾರಿಗಳು ಕಾಮಗಾರಿಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಸೆಸ್ಕ್ಗೆ ಸೂಚನೆ: ಸೆಸ್ಕ್ ಅಧಿಕಾರಿಗಳು ಬೇಲೂರಿನಲ್ಲಿ ಕುಡಿಯುವ ನೀರು ಪೂರೈಕೆ ಪಂಪಸೆಟ್ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಆದ್ದರಿಂದ ಕೂಡಲೇ ಬಾಕಿ ಉಳಿದಿ ರುವ 2013-14ನೇ ಸಾಲಿನ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ನೀರಾವರಿ ಇಲಾಖೆಯ ಎಂಜಿನಿಯರ್ ಕೃಷ್ಣ ಪ್ರಸಾದ್ ಪ್ರತಿಕ್ರಿಯಿಸಿ, ಬರಪರಿಹಾರ ಕಾಮಗಾರಿಗೆ ಜಿಲ್ಲಾಧಿಕಾರಿಗಳ ನಿಧಿಯಿಂದ ಕಾಮಗಾರಿ ನಡೆಸಲಾಗುತ್ತಿದೆ. 178 ಕಾಮಗಾರಿಗಳ ಪೈಕಿ 92 ಕಾಮಗಾರಿಗಳು ಆಗಿದ್ದು, ಉಳಿಕೆ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಲಾಗುತ್ತದೆ ಎಂದರು.
ಅತಿಥಿ ಶಿಕ್ಷಕರ ನೇಮಕ: ಮೊರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪುರುಷೋತ್ತಮ್ ಸಭೆಯಲ್ಲಿ ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ.ಶ್ಯಾಮಲಾದೇವಿ ಮಾತನಾಡಿ, ಜಿಲ್ಲೆಯಲ್ಲಿ 135 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 7 ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆಗಳಿವೆ. ಆದರೆ ನಮ್ಮಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ. 71 ತಜ್ಞ ವೈದ್ಯರು, 38 ಎಂಬಿಬಿಎಸ್ ವೈದ್ಯರ ಕೊರತೆ ಇದೆ ಎಂದರು.
ಕಳಪೆ ಗುಣಮಟ್ಟದ ಹಾಲು: ಕ್ಷೀರಭಾಗ್ಯದಲ್ಲಿ ಮಕ್ಕಳಲ್ಲಿ ಕಡಿಮೆ ಗುಣಮಟ್ಟದ ಹಾಲು ಹಾಗೂ ಮೊಟ್ಟೆಯನ್ನು ಕೆಲವು ಕಡತಗಳಲ್ಲಿ ಸರಿಯಾಗಿ ನೀಡುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ವಿಧಾನಸಭೆಯಲ್ಲಿಯೂ ಚರ್ಚೆಯಾಗಿದೆ ಎಂದರು. ಜಿಲ್ಲೆಯ ನಾನಾ ಇಲಾಖೆಯ ಪ್ರಗತಿಗಳು ಕಡಿಮೆ ಇದ್ದು, ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವ ಹಿಸಬೇಕು ಹಾಗೂ ಕಾಮಗಾರಿ ಪ್ರಗತಿಗೆ ತೊಂದರೆಗಳಿದ್ದರೆ ಅದನ್ನು ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಸೂಚಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಹಾಗೂ ಅಧಿಕಾರಿಗಳು ಇದ್ದರು.
258 ಕಾಮಗಾರಿ ಬಾಕಿ
ಸೆಸ್ಕ್ ಎಂಜಿನಿಯರ್ ಉಮೇಶ್ ಮಾತನಾಡಿ, ಬೇಲೂರಿನಲ್ಲಿ ಕೇವಲ 12 ಕಾಮಗಾರಿಗಳು ಮಾತ್ರ ಬಾಕಿ ಉಳಿದಿವೆ. ಇದರಲ್ಲಿ 2013-14ನೇ ಸಾಲಿನದು ಕೇವಲ 3 ಕಾಮಗಾರಿಗಳು, ಇನ್ನು 9 ಕಾಮಗಾರಿಗಳು 2014-15ನೇ ಸಾಲಿನದಾಗಿದೆ. ಈ ಪೈಕಿ 8 ಕಾಮಗಾರಿಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ಸಂಪೂರ್ಣವಾಗಿ 258 ಹಳೆಯ ಮತ್ತು ಹೊಸ ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು. ನಂತರ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಮಾತನಾಡಿ, ನೀರಾವರಿ ಇಲಾಖೆಯವರು ಕೆಲವೇ ಕಾಮಗಾರಿಗಳು ಮಾತ್ರ ಬಾಕಿ ಉಳಿದಿವೆ ಎಂಬ ಮಾಹಿತಿಯನ್ನು ನೀಡುತ್ತಿದ್ದಾರೆ. ಆದರೆ ಚೆಸ್ಕಾಂ ಇಲಾಖೆಯವರು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇನ್ನೂ 258 ಕಾಮಗಾರಿಗಳು ಬಾಕಿ ಉಳಿದಿವೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇಲ್ಲಿ ಅಧಿಕಾರಿಗಳ ನಡುವೆಯೇ ಸರಿಯಾದ ಮಾಹಿತಿ ಇಲ್ಲ. ಒಂದೊಂದು ಇಲಾಖೆಯವರು ಒಂದೊಂದು ರೀತಿಯ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಆಸಮಾಧಾನ ವ್ಯಕ್ತಪಡಿಸಿದರು
Advertisement