ಹಾಸನ: ರಾಷ್ಟ್ರ ಅಭಿವೃದ್ದಿಗೆ ಪ್ರತಿಯೊಬ್ಬರು ತಮ್ಮದೆ ಆದ ಕೊಡುಗೆ ನೀಡುತ್ತಾರೆ ಈ ನಿಟ್ಟಿನಲ್ಲಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲವನ್ನು ಸಮತೋಲನವಾಗಿ ಬಳಸಿಕೊಳ್ಳುವುದರ ಮೂಲಕ ಮುಂದಿನ ಪೀಳಿಗೆಗೆ ನೀಡಲು ಹೆಚ್ಚಿ ಗಮನ ನೀಡಬೇಕಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಪರಪ್ಪ ಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಾಂಖ್ಯಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಾಂಖ್ಯಿಕ ತಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರು ಆರ್ಥಿಕ ವ್ಯವಸ್ಥೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕೆಲವು ಮಾನದಂಡ ಇಟ್ಟುಕೊಂಡು ಸಮೀಕ್ಷೆ ನಡೆಸಿ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದರ ಮೂಲಕ ಆರ್ಥಿಕ ಅಭಿವೃದ್ಧಿಗೆ ಪ್ರೇರೆಪಣೆ ನೀಡಿದ್ದಾರೆ ಎಂದರು.
ಮೌಢ್ಯ ತೊಲಗಿಸಿ: ಗ್ರಾಮೀಣ ಭಾಗದ ಜನತೆ ನೀರನ್ನು ಹಣ ಕೊಟ್ಟು ಕೊಳ್ಳುವ ಪರಿಸ್ಥಿತಿ ಉದ್ಬವಿಸಿದೆ. ಮುಂದಿನ ದಿನಗಳಲ್ಲಿ ನೀರು ಮತ್ತು ಇಂಧನ ಮರೀಚಿಕೆಯಾಗಲಿದೆ. ಬಾಲ್ಯ ವಿವಾಹ, ಜೀತ ಪದ್ದತಿ, ಬಾಲಕಾರ್ಮಿಕ ಪದ್ಧತಿ ಮುಂತಾದ ಮೌಢ್ಯಗಳನ್ನು ತಡೆಗಟ್ಟುವ ಮೂಲಕ ಸಮಾಜದಲ್ಲಿ ಸುಧಾರಣೆ ತರಬೇಕು ಎಂದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಆರ್ಥಶಾಸ್ತ್ರ ಉಪನ್ಯಾಸಕ ಡಾ. ಶಿವರಾಜ್ ಮಾತನಾಡಿ, ಸರ್ಕಾರ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತದೆ. ಇದರಿಂದ ದೇಶದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. ರಾಷ್ಟ್ರೀಯ ಆದಾಯದಲ್ಲಿ ಶೇಕಡ 64 ರಷ್ಟು ಸೇವಾ ಕ್ಷೇತ್ರದ ಕೊಡುಗೆಯಾಗಿದೆ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನಾಗರಾಜ್, ನಿವೃತ್ತ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಾಜಪ್ಪ, ಸಹಾಯಕ ನಿರ್ದೇಶಕ ರಾಮಚಂದ್ರ ಇದ್ದರು.
ಚಂದ್ರಕಲಾ ಪ್ರಾರ್ಥಿಸಿದರೆ, ವರದರಾಜು ಸ್ವಾಗತಿಸಿ ವಂದಿಸಿದರು.
Advertisement