ಅರಸೀಕೆರೆ: ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಕಾಯ್ದೆ ಅನ್ವಯ ಪಟ್ಟಣದ ಎಲ್ಲಾ ಬೀದಿ ವ್ಯಾಪಾರಸ್ಥರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಪಡೆದುಕೊಂಡು ವ್ಯಾಪಾರವನ್ನು ಮಾಡಬೇಕು. ತಪ್ಪಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಕೆ.ಎಂ.ಸತ್ಯನಾರಾಯಣ್ ಎಚ್ಚರಿಸಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪಟ್ಟಣದ ಬೀದಿ ವ್ಯಾಪಾರಿಗಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಹಿತಚಿಂತನೆ ಕಾಪಾಡಲು ನೂತನವಾಗಿ ಜಾರಿಗೆ ತಂದಿರುವ ಕಾಯ್ದೆಯ ಅನುಸಾರ ಪ್ರತಿಯೊಬ್ಬ ಬೀದಿ ವ್ಯಾಪಾರಸ್ಥರು ತಮ್ಮ ಸಂಪೂರ್ಣ ಹೆಸರು ಮತ್ತು ವಿಳಾಸ ಹಾಗೂ ವಿವರಗಳನ್ನು ಈಗಾಗಲೇ ರಚಿತವಾಗಿರುವ ಸಮಿತಿ ಮುಂದೆ ನೋಂದಾಯಿಸಿ ಕೊಂಡು ಅಧಿಕೃತ ಗುರುತಿನ ಚೀಟಿ ಪಡೆದು ಬೀದಿಯಲ್ಲಿ ವ್ಯಾಪಾರವನ್ನು ಕೈಗೊಳ್ಳಬಹುದಾಗಿದೆ.
ಗುರುತು ಚೀಟಿ ಪಡೆಯಿರಿ: ತಪ್ಪಿದಲ್ಲಿ ಸಮಿತಿಯು ಮಹಜರ್ ಮಾಡಿ ಗುರುತಿನ ಚೀಟಿ ಇಲ್ಲದೆ ವ್ಯಾಪಾರ ಮಾಡುವ ವ್ಯಾಪಾರಸ್ಥರ ಮಾರಾಟದ ಸರಕುಗಳನ್ನು ತಾತ್ಕಾಲಿಕವಾಗಿ ಸಮಿತಿಯು ವಶಕ್ಕೆ ಪಡೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಹೊಂದಿದ್ದು, ನಂತರ ವ್ಯಾಪಾರಸ್ಥರು ನಿಗದಿತ ಶುಲ್ಕವನ್ನು ಪಾವತಿಸಿ ತಮ್ಮ ಸರಕುಗಳನ್ನು ವಾಪಸ್ ಪಡೆಯಬೇಕಾಗುತ್ತದೆ. ಆದಕಾರಣ ಇದಕ್ಕೆ ಅವಕಾಶ ನೀಡದೇ ಪಟ್ಟಣದ ಎಲ್ಲಾ ಬೀದಿ ವ್ಯಾಪಾರಿಗಳು ಸಮಿತಿಯ ಮೂಲಕ ತಮ್ಮ ಗುರುತಿನ ಚೀಟಿ ಪಡೆಯಬೇಕೆಂದರು.
ಪುರಸಭೆ ಪರಿಸರ ಅಭಿಯಂತರರಾದ ಎಸ್.ಎಂ.ನವೀನ್ ಮಾತನಾಡಿ, ಪಟ್ಟಣದ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಸ್ಥಳದ ಸ್ವಚ್ಛತೆ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಅಗತ್ಯ. ಪರಿಸರದ ನೈರ್ಮಲ್ಯಕ್ಕೆ ಧಕ್ಕೆ ಉಂಟು ಮಾಡದೆ ವ್ಯಾಪಾರ ಮಾಡಬೇಕು ಎಂದರು.
ಸಭೆಯಲ್ಲಿ ಎಸ್ಬಿಎಂ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ ಪೈ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ.ಮೋಹನ್, ಎ.ಎಸ್.ಐ. ಭೀಮಾನಾಯ್ಕ್, ಹಣ್ಣು ಮಾರಾಟಗಾರರ ಸಂಘದ ಅಧ್ಯಕ್ಷ ಅಯ್ಯೂಬ್ ಖಾನ್, ನಿರಂತರ ಉಳಿತಾಯ ಗುಂಪಿನ ಪ್ರತಿನಿಧಿ ಶೋಭಾ, ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವನಂಜಪ್ಪ, ಪುರಸಭಾ ಸಮುದಾಯ ಸಂಘಟನ ಅಧಿಕಾರಿ ಸಿ.ಆರ್.ಪರಮೇಶ್ ಮತ್ತು ಪುಷ್ಪಲತಾ ಇತರರು ಇದ್ದರು.
Advertisement