ಹಾಸನ: ಹೇಮಾವತಿ ಜಲಾಶಯ ಯೋಜನೆ ಬಾಧಿತರಿಗೆ ಪುನರ್ ವಸತಿ ಕಲ್ಪಿಸುವ ಕಾರ್ಯ ಪೂರ್ಣಗೊಂಡಿಲ್ಲ. ಈ ಬಗ್ಗೆ ಅಗತ್ಯ ಕ್ರಮ ವಹಿಸಬೇಕಿದೆ. ಅಲ್ಲದೆ ಮಲೆನಾಡು ತಾಲೂಕುಗಳಾದ ಸಕಲೇಶಪುರ-ಆಲೂರುಗಳಲ್ಲಿ ಮಳೆ ಹಾನಿ ನಿಯಂತ್ರಣಗಳಿಗೆ 100 ಕೋಟಿ ರು. ಶಾಶ್ವತ ಅನುದಾನ ಅಗತ್ಯವಿದೆ ಎಂದು ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಗೊರೂರು ಜಲಾಶಯದಲ್ಲಿಂದು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳೊಂದಿಗೆ ಸೇರಿ ಹೇಮಾವತಿಗೆ ಬಾಗಿನ ಸಮರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಗೊರೂರಿನಲ್ಲಿ ಮೊದಲ ಹಂತದಲ್ಲಿ 80 ಮನೆಗಳಿಗೆ ಪುನರ್ ವಸತಿ ಕಲ್ಪಿಸಲಾಗಿದೆ. ಇನ್ನು 150 ಮನೆಗಳು ಕುಸಿಯುವ ಹಂತದಲ್ಲಿದ್ದು ಅವುಗಳನ್ನು ಸ್ಥಳಾಂತರಿಸಬೇಕಿದೆ. ಹೇಮಾವತಿ ಜಲಾಶಯದಿಂದ 48 ಹಳ್ಳಿಗಲು ಮುಳುಗಡೆಯಾಗಿದ್ದು, 40 ವರ್ಷಗಳೇ ಕಳೆದರೂ ಪುನರ್ವಸತಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ ಎಂದರು.
ರು. 100 ಕೋಟಿ ಶಾಶ್ವತ ನಿಧಿ: ಹೇಮಾವತಿ ಜಲಾನಯನ ಪ್ರದೇಶವಾಗಿರುವ ಸಕಲೇಶಪುರ ಹಾಗೂ ಆಲೂರು ತಾಲೂಕಿನಲ್ಲಿ ನಿರಂತರವಾಗಿ ಸುರಿಯುವ ಮಳೆಯಿಂದಾಗಿ ಜನ ಜೀವನ ಸಂಕಷ್ಟಕ್ಕೆ ಸಿಲುಕುತ್ತಲೇ ಇದೆ. ರಸ್ತೆಗಳು ದುಸ್ಥಿತಿಯಲ್ಲಿವೆ. ಅಲ್ಲಲ್ಲಿ ಗುಡ್ಡ ಕುಸಿತ, ವಿದ್ಯುತ್ ವ್ಯತ್ಯಯ ಸಮಸ್ಯೆಗಳು ನಿರಂತರವಾಗಿ ಆಗುತ್ತಲೇ ಇರುತ್ತವೆ. ಹೀಗಾಗಿ ಈ ಭಾಗಕ್ಕೆ ಪರಿಹಾರ ಕ್ರಮಗಳಿಗೆ ರು. 100 ಕೋಟಿ ಶಾಶ್ವತ ನಿಧಿ ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಮಲ್ಲಿಗೆವಾಳು ದೇವಪ್ಪ ಹಾಗೂ ನಂಜುಂಡಸ್ವಾಮಿ, ಸಕಲೇಶಪುರ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಗೀತಾಮಂಜೇಗೌಡ, ಸದಸ್ಯ ದಿವಾಕರ ಮತ್ತಿತರರು ಬಾಗಿನ ಸಮರ್ಪಣೆ ಸಂದರ್ಭದಲ್ಲಿ ಹಾಜರಿದ್ದರು.
ಆಲೂಗಡ್ಡೆಗೆ ಅಂಗಮಾರಿ
ಹೆಬ್ಬಾಳು, ಇಬ್ಬೀಡು, ಹಗರೆ ಇನ್ನಿತರೆಡೆ ಆಲೂಗಡ್ಡೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಗಿಡದ ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯಲಾರಂಭಿಸಿದ್ದು ಕರಿಕಡ್ಡಿ ರೋಗಕ್ಕೆ ಭೂಮಿಗೆ ತಲೆ ಭಾಗಿ ಸೋತು ಮಲಗಿವೆ. ಆಲೂಗಡ್ಡೆ ಬೆಳೆದ ಒಂದು ಜಾಗದಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡರೆ 5 ಕಿ.ಮೀ ವ್ಯಾಪ್ತಿಯ ಸುತ್ತ ಮುತ್ತಲಿನ ಆಲೂ ಬೆಳೆಗೆ ಅತಿಬೇಗ ಹರಡುವುದರಿಂದ ಶೇ.90 ಬೆಳೆ ನಾಶವಾಗಿದೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಬಂದಿರುವುದಾಗಿ ದೃಢೀಕರಿಸಿದ್ದು ಮಳೆ ಹೀಗೆ ಮುಂದುವರೆದಲ್ಲಿ ಬೆಳೆ ಸಂಪೂರ್ಣ ಕರಗಿಹೋಗುವ ಆತಂಕ ಮನೆಮಾಡಿದೆ.
Advertisement