ಕನ್ನಡಪ್ರಭ ವಾರ್ತೆ, ಅರಸೀಕೆರೆ, ಜು. 18
ಪ್ರಸ್ತುತ ದಿನಗಳಲ್ಲಿ ಜಾನುವಾರುಗಳ ಮೇಲೆ ನಾನಾ ರೋಗಗಳು ಕಾಣಿಸಿಕೊಳ್ಳುತ್ತಿವೆ. ಆದರಿಂದ ರೈತರು ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರೆ ತಮ್ಮ ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳಲು ಸಾಧ್ಯ ಎಂದು ಪಶು ವೈದ್ಯಾಧಿಕಾರಿ ಹನುಮಂತಪ್ಪ ಸಲಹೆ ನೀಡಿದರು.
ತಾಲೂಕಿನ ದುಮ್ಮೇನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಕೃಷಿ ಅಭಿವೃದ್ಧಿ ಯೋಜನೆ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ರೈತರಿಗೆ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಕೆಲ ಗ್ರಾಮಗಳಲ್ಲಿ ಹೋರಿ ಹಾಗೂ ಹಸುಗಳಲ್ಲಿ ಚಪ್ಪೇರೋಗ ಕಾಣಿಸಿಕೊಂಡಿದೆ.
ಆದರೆ ಇದರಿಂದ ರೈತರು ಭಯಭೀತರಾಗುವ ಅವಶ್ಯಕತೆಯಿಲ್ಲ ಚಪ್ಪೆರೋಗಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆವಿದ್ದು ರೈತರು ತಮ್ಮ ಜಾನುವಾರಗಳನ್ನು ಸಮೀಪದ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆ. ಚಪ್ಪೇರೋಗವನ್ನ ತಡೆಗಟ್ಟಲು ಸಾಧ್ಯವೆಂದು ತಿಳವಳಿಕೆಯನ್ನು ನೀಡಿದರು.
ಜಾನುವಾರು ವಿಮೆ ಮಾಡಿಸಿ: ದುಮ್ಮೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ ಪ್ರತಿಯೊಂದು ಜಾನುವಾರಗಳಿಗೂ ತಪ್ಪದೇ ವಿಮೆ ಮಾಡಿಸುವುದರಿಂದ ಅಕಾಲಿಕ ಕಾಯಿಲೆಗೆ ತುತ್ತಾಗಿ ಜಾನುವಾರುಗಳು ಸತ್ತರೆ ಬರುವ ಪರಿಹಾರದ ಹಣದಿಂದ ಮತ್ತೊಂದು ಜಾನುವಾರವನ್ನ ಖರೀದಿಸಲು ಸಹಕಾರಿಯಾಗಲಿದೆ ಎಂದರು.
ಧರ್ಮಸ್ಥಳ ಕ್ಷೇತ್ರ ಅಭಿವೃದ್ಧಿಸಂಯೋಜಕ ಅಧಿಕಾರಿ ಶೇಖರಣ್ಣ ಮಾತನಾಡಿ, ರೈತರು ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆ ಮಾಡಿದರೆ. ಆರ್ಥಿಕವಾಗಿ ಲಾಭ ಗಳಿಸಲು ಸಾಧ್ಯವೆಂದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರು ಆಲೋಚಿಸುವ ಮೂಲಕ ಆರ್ಥಿಕವಾಗಿ ಮೇಲೆ ಬರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕ್ಷೇತ್ರದ ಅಭಿವೃದ್ಧಿ ಸಂಸ್ಥೆಯ ಸಂಯೋಜಕರಾದ ಕುಮಾರ್, ಗೀತಾ, ಗ್ರಾಮದ ನಾಗೇಂದ್ರ, ಮಹೇಶ್ ಮತ್ತಿತರರು ಇದ್ದರು.