ಹೊಳೆನರಸೀಪುರ: ರೈತರು ತಮ್ಮ ಭೂಮಿಯಲ್ಲಿನ ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವ ಸಲುವಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕಾರೆಕರೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ತಿಳಿಸಿದರು.
ತಾಲೂಕಿನ ಬಿಟ್ಟಗೌಡನಹಳ್ಳಿ ಗ್ರಾಮದಲ್ಲಿ ಹಾಸನದ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಕೈಗೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಭಿರದಲ್ಲಿ ಮಾತನಾಡಿ, ರೈತರು ತಮ್ಮ ಭೂಮಿಯಲ್ಲಿನ ಮಣ್ಣನ್ನು ಬದುಗಳು, ಕಾಲುವೆ, ವಿದ್ಯುತ್ ಕಂಬ, ಜೌಗು ಪ್ರದೇಶಗಳಲ್ಲಿ, ಗೊಬ್ಬರದ ಗುಂಡಿಗಳು, ಮರಗಳು, ಬಾವಿಗಳ ಹತ್ತಿರ ಹಾಗೂ ಗೊಬ್ಬರಗಳನ್ನು ಹಾಕಿರುವ ಪ್ರದೇಶಗಳಲ್ಲಿ ಸಂಗ್ರಹಿಸಬಾರದು ಎಂದು ರೈತರಿಗೆ ಕಿವಿ ಮಾತು ಹೇಳಿದರು.
ಮಣ್ಣಿನ ಮಾದರಿಯನ್ನು ಸಂಗ್ರಹಿಸುವ ವಿಧಾನ - ಮಣ್ಣಿನ ಮೇಲ್ಭಾಗವನ್ನು ಸ್ವಚ್ಛಗೊಳಿಸಿ ನಂತರ ವಿ(ಗಿ) ಆಕಾರದ ಗುಂಡಿಯನ್ನು ತೆಗೆದು, ನಂತರ ಗುಂಡಿಯ ಎರಡೂ ಕಡೆಗಳಿಂದ ಮಣ್ಣಿನ ಪದರವನ್ನು ಸಂಗ್ರಹಿಸಿ, ಸಂಗ್ರಹಿಸಿದ ಮಾದರಿಯನ್ನು ಶುಭ್ರವಾದ ಕಾಗದ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿ ಮಿಶ್ರಮಾಡಿ, ನಂತರ ಕಲ್ಲು, ಬೇರು, ಕೊಳೆ ಇತ್ಯಾಧಿಗಳನ್ನೂ ಆರಿಸಿ ಹೆಂಟೆಗಳಿದ್ದರೆ ಪುಡಿ ಮಾಡಿ, ಮಣ್ಣನ್ನು ವೃತ್ತಾಕಾರದಲ್ಲಿ ಹರಡಿ 4 ಭಾಗಗಳಾಗಿ ವಿಂಗಡಿಸಿ ವಿರುದ್ಧ ದಿಕ್ಕಿನಲ್ಲಿರುವ ಎರಡು ಭಾಗಗಳನ್ನು ಆಯ್ದು, ಸುಮಾರು 500 ಗ್ರಾಂನಷ್ಟು ಬರುವವರೆಗೆ ಈ ವಿಧಾನವನ್ನು ಪುನರಾವರ್ತಿಸಿ ನಂತರ ಬಟ್ಟೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ರೈತರ ಹೆಸರು, ತಂದೆ ಹೆಸರು, ಜಮೀನಿನ ವಿಸ್ತೀರ್ಣ, ಸರ್ವೇ ನಂಬರ್, ಹಿಂದಿನ ಬೆಳೆ, ಮಂದಿನ ಬೆಳೆ ಕಳುಹಿಸಬೇಕು ಎಂದು ವಿವರಿಸಿದರು.
ತಾ.ಪಂ. ಮಾಜಿ ಉಪಾಧ್ಯಕ್ಷ ಡಿ. ಕೃಷ್ಣಪ್ಪ, ಗ್ರಾಮದ ರೈತ ಬಾಂಧವರು, ಮತ್ತು ವಿದ್ಯಾರ್ಥಿಗಳಾದ ಯಶವಂತ್, ಮೋಹನ್, ಸಂಜಯ್ , ಹರೀಶ್, ಲಹರಿ, ಸಹನ, ರಶ್ಮಿ, ಪೂಜಾ ಹಾಗೂ ವಿನಾಯಕ್ ಇದ್ದರು.
Advertisement