ಬೇಲೂರು: ತಾಲೂಕಿನ ನಾರ್ವೆಪೇಟೆ ಗ್ರಾಪಂ ಬಿಲ್ಕಲೆಕ್ಟರ್ ಹುದ್ದೆ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗುರುವಾರ ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗ್ರಾಪಂ ಮುಂಬಾಗ ಪ್ರತಿಭಟನೆ ನಡೆಸಿದರು.
ಜಾನಕೆರೆ ಹೇಮಂತ್ ಕುಮಾರ್ ಮಾತನಾಡಿ, ನಾರ್ವೆಪೇಟೆ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅರ್ಹರಲ್ಲದ ಅಭ್ಯರ್ಥಿಯನ್ನು ಬಿಲ್ ಕಲೆಕ್ಟರ್ ಹುದ್ದೆಗೆ ಆಯ್ಕೆಮಾಡಿದ್ದು, ಕೂಡಲೇ ಉನ್ನತ ಅಧಿಕಾರಿಗಳು ಈ ಬಗ್ಗೆ ತನಿಖೆ ಅರ್ಹ ಅಭ್ಯರ್ಥಿಯನ್ನು ನೇಮಕಾತಿ ಮಾಡಬೇಕು. ಗ್ರಾಪಂ ಅಧಿಕಾರಿಗಳು ಯಾವ ಮಾನ ದಂಡ ಅನುಸರಿಸಿ ಆಯ್ಕೆ ಪ್ರಕ್ರಿಯೆ ಮಾಡಿದ್ದಾರೆ ಎಂಬುದನ್ನು ತಾಪಂ ಎಒ ಸ್ವಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಒಟ್ಟು 12 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಶೇ.52 ಅಂಕಗಳಿಸಿರುವ ನಾರಾಯಣ ಎಂಬುವರ ದಾಖಲಾತಿ ಪರಿಶೀಲಿಸದೆ ಆಯ್ಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ತಾಪಂ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣನವರ್ ಮಾತನಾಡಿ, ಹುದ್ದೆಯನ್ನು ರೋಸ್ಟರ್ ಪದ್ಧತಿಯಂತೆ ನೇಮಕಾತಿ ಮಾಡಿಲ್ಲ, ಈ ಬಗ್ಗೆ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಚಂದ್ರಯ್ಯ, ರಂಜಿತ್, ಮದನ್, ಚೈತ್ರ, ಅರ್ಪಿತಾ, ಶ್ರೀರಾಮಸೇನೆಯ ಅರುಣ್, ಲಿಖಿತ್ ಇದ್ದರು.