ಚನ್ನರಾಯಪಟ್ಟಣ: ಶಾಲಾ ಕಾಲೇಜು ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಧರಣಿ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಭಾರತ ವಿದ್ಯಾರ್ಥಿ ಪೆಡರೇಷನ್ ಸಹಯೋಗದಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳವನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿ ರಚಿಸಿ: ಶಾಲಾ ಕಾಲೇಜು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, ಪ್ರತಿ ಕಾಲೇಜುಗಳಲ್ಲಿಯೂ ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿ ರಚಿಸುವಂತೆ ಹಲವು ದಿನಗಳಿಂದ ಮನವಿ ಸಲ್ಲಿಸುತ್ತಿದ್ದರೂ ಅದನ್ನು ರಚಿಸಲು ನಿರುತ್ಸಾಹ ತೋರುತ್ತಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷೆ ಧನಲಕ್ಷ್ಮಿ ಆರೋಪಿಸಿದರು.
ಕಳೆದ ಒಂದೂವರೆ ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆಯನ್ನು ಕೊಲೆ ಮಾಡಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು, ವರದಿಯನ್ನು ನೀಡಲು ಸಿಬಿಐ ಹಿನ್ನಡೆ ತೋರುತ್ತಿರುವುದರಿಂದ ಅಪರಾಧಿಗಳು ರಾಜಾರೋಷವಾಗಿ ತಿರುಗಲು ಅವಕಾಶ ನೀಡಿದ್ದಾರೆ ಎಂದು ದೂರಿದರು.
ಹೇಳಿಕೆಗೆ ವಿರೋಧ: ಸಮಾಜದ ಕೆಲ ಮುಖಂಡರು ಮಹಿಳೆಯರು ಪುರುಷರನ್ನು ಲೈಂಗಿಕ ಆಸೆಗೆ ಪ್ರಚೋದನೆ ಮಾಡುವಂತೆ ಮಾಡುವುದರಿಂದ ರೇಪ್ಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡುತ್ತಿದ್ದು, ಅವರು ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುವುದು ಸರಿಯಲ್ಲ. ಪುರುಷ ಪ್ರಧಾನ ದೇಶ ಎಂದು ತಿಳಿದಿರುವ ಅವರು ಮಹಿಳೆ ಯಾವುದಕ್ಕೂ ಕಡಿಮೆಯಿಲ್ಲ ಎಂಬುದನ್ನು ತಿಳಿಯಬೇಕು ಎಂದು ಎಚ್ಚರಿಸಿದರು.
ಬಹುತೇಕ ಕಂಪನಿಗಳು ತಾವು ಉತ್ಪಾದಿಸುವ ವಸ್ತುಗಳ ಬಗ್ಗೆ ತಿಳಿಸಲು ಮಹಿಳೆಯರನ್ನು ಬಳಸಿಕೊಳ್ಳುತ್ತಿರುವುದು ನಿಲ್ಲಬೇಕು ಎಂದು ಆಗ್ರಹಿಸಿದರು. ಡಿವೈಎಪ್ಐ ಚನ್ನರಾಯಪಟ್ಟಣ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಇದ್ದರು.