ಅರಕಲಗೂಡು: ತಾಲೂಕಿನ ರಸ್ತೆಗಳೆಲ್ಲಾ ಗುಂಡಿ ಬಿದ್ದು ಸಂಚಾರ ಅಸಾಧ್ಯ ಎನ್ನುವ ಪರಿಸ್ಥಿತಿ ಎದುರಾಗಿದ್ದರೂ ಕ್ಷೇತ್ರದ ಶಾಸಕರು ಮಾತ್ರ ಜನರ ಕಣ್ಣಿಗೆ ಕಾಣದಂತಾಗಿದ್ದಾರೆ. ಜನರ ಸಮಸ್ಯೆಗಳಿಗಿಂತ ಅವರಿಗೆ ಮಂತ್ರಿ ಪದವಿಯೇ ಹೆಚ್ಚಾಗಿದೆ ಅವರಿಗೆ ಎಂದು ಆರೋಪಿಸಿ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಮತ್ತು ತಾಲೂಕು ಬಿಜೆಪಿ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತ್ಯೇಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಿದರು.
ರೈತಸಂಘದ ಪ್ರತಿಭಟನೆ: ಇಲ್ಲಿಗೆ ಸಮೀಪದ ಪೇಟೆ ಮಾಚಗೌಡನಹಳ್ಳಿ ಗ್ರಾಮದ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾದ ರೈತ ಸಂಘದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ರಸ್ತೆಯ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ರಸ್ತೆಯಲ್ಲೇ ಭತ್ತದ ಸಸಿಗಳನ್ನು ನಾಟಿ ಮಾಡುವ ಮೂಲಕ ತಮ್ಮ ಪ್ರತಿಭಟನೆ ಪ್ರದರ್ಶಿಸಿದರು. ರೈತ ಸಂಘದ ಮುಖಂಡ ಯೋಗಣ್ಣ ಮಾತನಾಡಿ, ಒಂದು ವಾರದೊಳಗೆ ರಸ್ತೆ ದುರಸ್ತಿ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ನಂತರ ತಹಸೀಲ್ದಾರ್ ಮೇಹನ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಿಜೆಪಿ ಪ್ರತಿಭಟನೆ: ಪಟ್ಟಣದ ಅನಕೃ ವೃತ್ತದಲ್ಲಿ ಮೊದಲು ಪ್ರತಿಭಟನೆಗೆ ಮುಂದಾದ ಬಿಜೆಪಿಯ ನೂರಾರು ಕಾರ್ಯಕರ್ತರು ಸರ್ಕಾರದ ದೋರಣೆಯನ್ನು ಖಂಡಿಸಿದರು. ಪಟ್ಟಣದಲ್ಲಿ ಮೆರವಣಿಗೆಯಲ್ಲಿ ತೆರಳಿದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರುಗಳು ಹಾಸನ ರಸ್ತೆಯ ಶಂಭುನಾಥಪುರದ ಬಳಿ ಗುಂಡಿಬಿದ್ದ ರಸ್ತೆಯಲ್ಲಿ ಸಸಿಗಳನ್ನು ನಾಟಿ ಮಾಡಿ ರಸ್ತೆ ತಡೆ ಮಾಡಿದರು.
ನಂತರ ಮಾತನಾಡಿದ ಜಿಲ್ಲಾ ಬಿಜೆಪಿ ಸಂಘಟನಾ ಕಾರ್ಯದರ್ಶಿ ನಟೇಶ್ ಕುಮಾರ್, ಶಾಸಕರಿಗೆ ತಮ್ಮ ಕ್ಷೇತ್ರದ ಗುಂಡಿಗಳನ್ನು ಮುಚ್ಚಿಸಲು ಸಾಧ್ಯವಾಗಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಮರಡಿ ಸೋಮಶೇಖರ್, ಯುವ ಮುಖಂಡ ಎನ್.ರವಿಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಟಿ.ಕೇಶವೇಗೌಡ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಮತ್ತು ವಿಶ್ವನಾಥ್, ರೈತಮೋರ್ಚಾ ಅಧ್ಯಕ್ಷ ಶ್ರೀದರೇ ಅರಸ್, ಜಿಲ್ಲಾ ಕಾರ್ಯಕಾರಣಿ ಸದಸ್ಯ ಗುರಪ್ಪ, ಜಗದೀಶ್,ಮಂಡಳ ಉಪಾಧ್ಯಕ್ಷ ಷಡಾಕ್ಷರಿ, ಮಹದೇವ, ಕೊಣನೂರು ರಾಮಣ್ಣ,ಸ್ವಾಮಿಗೌಡ ಇತರರು ಪಾಲ್ಗೊಂಡಿದ್ದರು.