ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ಜು.27
ಪಟ್ಟಣದ ಹೊರಭಾಗದಲ್ಲಿ ಹಾದು ಹೋಗಿರುವ ಹೇಮಾವತಿ ಎಡದಂಡೆ ನಾಲೆ ನಾಗಸಮುದ್ರ ಬಳಿ ಒಡೆದು ಅಪಾರ ಪ್ರಮಾಣದಲ್ಲಿ ರೈತರ ಜಮೀನಿಗೆ ಹಾನಿಯಾಗಿರುವುದಲ್ಲದೆ, ಪಟ್ಟಣದ ಕೆಲ ಬಡಾವಣೆಯ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಭಾನುವಾರ 6-30ರ ಸಮಯದಲ್ಲಿ ಪಟ್ಟಣದ ಹೊರವಲಯದ ನಾಗಸಮುದ್ರ ಬಳಿ ಚಿಕ್ಕದಾಗಿ ಬಿರುಕು ಕಾಣಿಸಿಕೊಂಡು ನುಗ್ಗಿದ ನೀರು ಇಡೀ ನಾಲೆಯನ್ನೇ ಬೇರ್ಪಡಿಸಿದೆ. ತುಮಕೂರು ಮತ್ತು ಮಂಡ್ಯ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಗಳಿಗೆ ಬಿಟ್ಟ ನೀರು ನಾಲೆ ಒಡೆದ ಪರಿಣಾಮ ರೈತರ ಜಮೀನಿಗೆ ನುಗ್ಗಿದೆಯಲ್ಲದೆ ಪಟ್ಟಣದ ಆದರ್ಶನಗರ, ರಾಮೇಶ್ವರ ಬಡಾವಣೆ, ಹಾಗೂ ತೋಟದಮನೆ ರಸ್ತೆಯಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿದೆ.
ಒಡೆದ ಹೊಸ ನಾಲೆ: ಹೇಮಾವತಿ ಜಲಾಶಯದಿಂದ ಶನಿವಾರವಷ್ಟೇ ನಾಲೆಗೆ ನೀರು ಬಿಟ್ಟಿದ್ದು, ನೀರು ಬಾಗೂರು ನವಿಲೆ ಸುರಂಗ ಮೂಲಕ ತುಮಕೂರು ಜಿಲ್ಲೆಗೆ ಹರಿಯುತ್ತಿದ್ದಂತೆ ನಾಗಸಮುದ್ರ ಬಳಿ ಹೊಸದಾಗಿ ನಿರ್ಮಿಸಿದ್ದ ನಾಲೆ ಒಡೆದು ಹೇಮಾವತಿ ಎಡದಂಡೆ ನಾಲೆಯ ಅಚ್ಚುಕಟ್ಟುದಾರರಿಗೆ ಬೆಳೆಯನ್ನೇ ನುಂಗಿಹಾಕಿದೆ. ಒಂದೇ ಬಾರಿಗೆ ನಾಲೆಗೆ 1800 ಕ್ಯೂಸೆಕ್ ನೀರನ್ನು ಬಿಟ್ಟಿದ್ದರಿಂದ ಒತ್ತಡ ಹೆಚ್ಚಾಗಿ ಹೊಸದಾಗಿ ನಿರ್ಮಿಸಿದ್ದ ಎಂಬಾಕ್ಮೆಂಟ್ನಲ್ಲಿ ಬಿರುಕು ಕಾಣಿಸಿಕೊಂಡು ಒಡೆದು ಹೋಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಳಪೆ ಕಾಮಗಾರಿ: ನಾಗಸಮುದ್ರ ಬಳಿಯಿರುವ ಹೇಮಾವತಿ ಎಡದಂಡೆ ನಾಲೆಯಲ್ಲಿ ಕಳೆದ ವರ್ಷವೇ ಅಲ್ಪ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದ್ದ ಕಾರಣ ನಾಲೆಯನ್ನು ನೇರವಾಗಿ ನಿರ್ಮಿಸಲು ಪ್ರಥಮ ದರ್ಜೆ ಗುತ್ತಿಗೆದಾರ ನಾರಾಯಣರೆಡ್ಡಿ ಎಂಬುವರಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಕಳಪೆ ಕಾಮಗಾರಿ ಪರಿಣಾಮದಿಂದಾಗಿ ನಾಲೆ ಒಡೆದಿದೆ.
ನಾಗಸಮುದ್ರ ಕೆರೆಯ ನೀರು ಹೊರಹೋಗಲು ನಾಲೆಯ ಕೆಳಭಾಗದಲ್ಲಿ ಕೆಳ ಸೇತುವೆ ನಿರ್ಮಿಸಿದ್ದು, ಕೆಳ ಸೇತುವೆಯ ಮೇಲೆ ಎಂಬಾಕ್ಮೆಂಟ್ ನಿರ್ಮಿಸುವ ಸಂದರ್ಭದಲ್ಲಿ ತೋರಿದ ನಿರ್ಲಕ್ಷ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದೆ. ಭಾನುವಾರ ಬೆಳಗ್ಗೆ 6ರ ಸಮಯದಲ್ಲಿ ಕೆಳ ಸೇತುವೆ ಪಕ್ಕದಲ್ಲಿ ನಾಲೆ ಅಲ್ಪ ಬಿರುಕು ಕಾಣಿಸಿಕೊಂಡಿದೆ. ಆ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರ ವಹಿಸಿ ಮನ್ನಚ್ಚರಿಕೆ ಕ್ರಮ ವಹಿಸಿದ್ದರೆ ಅನಾಹುತವಾಗುತ್ತಿರಲಿಲ್ಲ.
ಬತ್ತ ಬೆಳೆ ನಾಶ: ಹೇಮಾವತಿ ಎಡದಂಡೆ ನಾಲೆಯ ಅಚ್ಚುಕಟ್ಟಿನಲ್ಲಿ ಬತ್ತ ಬೆಳೆಯಲು ರೈತರು ತಮ್ಮ ಜಮೀನನ್ನು ಅಚ್ಚುಕಟ್ಟು ಮಾಡಿಕೊಂಡು ಬತ್ತದ ಹೊಗ್ಗ ಹಾಕಲು ನೀರನ್ನು ಕಾಯುತ್ತಿದ್ದರು. ಜುಲೈ ಮತ್ತು ಆಗಸ್ಟ್ ಮೊದಲ ವಾರದಲ್ಲಿ ರೈತ ಉತ್ತಮ ಇಳುವರಿ ತರುವ ಬತ್ತದ ಬೀಜವನ್ನು ಹೊಗ್ಗಕ್ಕೆ ಹಾಕಬೇಕಿದ್ದು, ನಾಲೆ ಒಡೆದಿರುವುದರಿಂದ ಅಲ್ಪಾವಧಿ ಬತ್ತ ಬೆಳೆಯಲೂ ಕೂಡ ಸಾಧ್ಯವಾಗದ ಸ್ಥಿತಿಗೆ ಬಂದಿದೆ.
ನಾಲೆ ಒಡೆದಿರುವ ಸ್ಥಳಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಭೇಟಿ ನೀಡಿ ಪರಿಶೀಲಿಸಿ ತುಮಕೂರಿಗೆ ನೀರು ಕೊಂಡೊಯ್ಯುವ ನಿಟ್ಟಿನಲ್ಲಿ ಕಾವೇರಿ ನಿಗಮದ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಹೆಚ್ಚು ನೀರು ಬಿಟ್ಟಿರುವುದು ಒಡಕಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ರೈತರ ಧರಣಿ: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ ಕಳಪೆ ಕಾಮಗಾರಿಗೆ ಕಾರಣರಾಗಿದ್ದಾರೆ. ಇದರಿಂದ ನಾಲೆ ಒಡೆದಿದ್ದು, ಕೂಡಲೇ ಅವರನ್ನು ಸೇವೆಯಿಂದ
ಅಮಾನತು ಮಾಡಬೇಕು ಹಾಗೂ ನೀರು ನುಗ್ಗಿರುವ ರೈತರಿಗೆ ವೈಜ್ಞಾನಿಕ ಬೆಲೆಯನ್ನು ಬೆಳೆಗಳಿಗೆ ನೀಡಬೇಕು ಎಂದು ರೈತ ಸಂಘದ ಕಾರ್ಯಕರ್ತರು ನಾಲೆ ಒಡೆದಿರುವ ಸ್ಥಳದಲ್ಲಿ ಧರಣಿ ನಡೆಸಿದರು.
ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಹೊಳೆನರಸೀಪುರ ಕಾಂಗ್ರೆಸ್ ಮುಖಂಡೆ ಅನುಪಮ ಭೇಟಿ ನೀಡಿ ರೈತ ಸಂಘದ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡು, ಅಧಿಕಾರಿಗಳು ರಾಜಕಾರಣಿಗಳ ಗಾಳಕ್ಕೆ ಬಿದ್ದು ತಮಗೆ ಬೇಕಾದವರಿಗೆ ಗುತ್ತಿಗೆ ನೀಡಿಸುತ್ತಿರುವುದರಿಂದ ಕಳಪೆ ಕಾಮಗಾರಿಗೆ ಕಾರಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಪರಿಹಾರಕ್ಕೆ ಆಗ್ರಹ
ನಾಲೆಯ ಸಾಮರ್ಥ್ಯಕ್ಕೂ ಹೆಚ್ಚು ನೀರು ಹರಿಸುವುದರಿಂದ ಆಗಾಗ ಸಂಭವಿಸುತ್ತಿರುವ ನಾಲೆಯ ಬಿರುಕಿನ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ನಾಲೆಯನ್ನು ವಿಸ್ತರಣೆ ಮಾಡುವಂತೆ ಒತ್ತಾಯಿಸಲಾಗುವುದು. ನಾಲೆಯ ಒಡಕಿನಿಂದ ನಷ್ಟ ಉಂಟಾಗಿರುವ ರೈತರ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ತಹಸೀಲ್ದಾರ್ ಅವರಿಗೆ ಒತ್ತಾಯಿಸಲಾಗಿದೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು. ಮಾಜಿ ಶಾಸಕ ಸಿ.ಎಸ್ ಪುಟ್ಟೇಗೌಡ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಎಂಜನಿಯರ್ ಪದ್ಮನಾಭ್ ಭೇಟಿ ನೀಡಿದ್ದರು.