ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿರುವ ಪೊಲೀಸರು ರು. 3,965 ಬೆಲೆಯ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಅರಸೀಕೆರೆ ತಾಲೂಕಿನ ಜಾವಗಲ್ ಹೊಬಳಿಯ ಕೋಳಗುಂದ ಗ್ರಾಮದ ಪಾರ್ವತಮ್ಮ (55) ಎಂಬವರು ತಮ್ಮ ಪೆಟ್ಟಿಗೆಅಂಗಡಿ ಮತ್ತು ಹೊಟೇಲ್ ಮುಂಭಾಗ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಜಾವಗಲ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅರಕಲಗೂಡು ತಾಲೂಕು ರಾಮನಾಥಪುರ ಹೋಬಳಿಯ ಲಕ್ಕೂರು ಕುಟುಕುಮಂಟಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ರಾಮನಾಥಪುರ ಹೋಬಳಿಯ ಲಕ್ಕೂರು ಗ್ರಾಮದ ನಂಜಯ್ಯ ಅಲಿಯಾಸ್ ನಂಜ (35) ಎಂಬಾತನೇ ಬಂಧಿತ ಆರೋಪಿ. ಮಾರಾಟ ಮಾಡಲು ಸಾಗಿಸುತ್ತಿದ್ದ 1,328 ಮೌಲ್ಯದ 90 ಎಂ.ಎಲ್, 43 ಓರಿಜಿನಲ್ ಚಾಯ್ಸ್ ವಿಸ್ಕಿ ಪ್ಲಾಸ್ಟಿಕ್ ಬಾಟಲಿಗಳನ್ನು ವಶಪಡಿಸಿಕೊಂಡು ಕೊಣನೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.