ಸಲೇಶಪುರ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು ಅಪಾರ ನಷ್ಟ ಸಂಭವಿಸಿದೆ.
ಬುಧವಾರ ಮಧ್ಯಾಹ್ನದಿಂದ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ತಡೆಗೋಡೆ ಕುಸಿದು ಶಭೀರ್ ಎಂಬುವವರ ಮನೆ ಜಖಂಗೊಂಡಿದೆ. ಚೂಟ ಸಾಬ್,ರೆಹಮಾನ್, ಅಜಿಂಅಫ್ ಹಾಗೂ ಕಭೀರ್ ಎಂಬುವವರ ಮನೆಗಳು ಭೂಕುಸಿತದ ಅಪಾಯ ಎದುರಿಸುತ್ತಿವೆ. ಇದಲ್ಲದೆ ಪ್ರೇಮನಗರ ಬಡಾವಣೆಯಲ್ಲಿ ಪಾಷ್ ಎಂಬವರ ಮನೆ ಮಳೆಯಿಂದಾಗಿ ಕುಸಿದಿದೆ. ನಿರಂತರ ಮಳೆಗೆ ಹೇಮಾವತಿ ನದಿಯ ಹರಿವು ಬಾರಿ ಪ್ರಮಾಣದಲ್ಲಿ ಹೆಚ್ಚಿದ್ದು, ಪಟ್ಟಣದ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ಇನ್ನೊಂದು ಅಡಿ ಬಾಕಿ ಇದೆ. ನದಿಯ ನೀರು ಸಮೀಪದ ಬತ್ತದ ಗದ್ದೆಗಳಿಗೆ ನುಗ್ಗಿರುವುದರಿಂದ ವ್ಯಾಪಕ ನಷ್ಟ ಸಂಭವಿಸಿದೆ.
ಇದಲ್ಲದೆ ಪ್ರಮುಖ ಉಪನದಿಗಳಾದ ಎತ್ತಿನಹೊಳೆ, ಪಾಲಳ್ಳಿಹೊಳೆ ಮುಂತಾದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬುಧವಾರ ಒಂದೇ ದಿನ ಮಾರನಹಳ್ಳಿ ಮಳೆ ಮಾಪನ ಕೇಂದ್ರದಲ್ಲಿ 200 ಮೀ.ಮೀ ನಷ್ಟು ಅಧಿಕ ಮಳೆ ದಾಖಲಾಗಿದೆ. ಈಗಾಗಲೇ ವಾಡಿಕೆಗಿಂತ 500 ಮೀ.ಮೀನಷ್ಟು ಅಧಿಕ ಮಳೆ ಬಿದ್ದಿದ್ದು ಕಾಫಿ ಹಾಗೂ ಕರಿಮೆಣಸು ಕಾಯಿ ಅಧಿಕ ಶೀತದಿಂದ ಉದುರಿ ನೆಲ ಸೇರುತ್ತಿರುವುದರಿಂದ ಬೆಳೆಗಾರರ ಮುಖದಲ್ಲಿ ಚಿಂತೆ ಕಾಣಿಸಿಕೊಂಡಿದೆ