ಹಾನಗಲ್ಲ: ಜನಪದ ಕಲೆಗಳು ಜೀವನದ ಉಸಿರಾದರೆ ನಮ್ಮ ಸಾಂಸ್ಕೃತಿಕ ಬದುಕು ವಿಸ್ತಾರಗೊಂಡು ಸಾಮರಸ್ಯದ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಿದ್ದೇಶ್ವರ ಪುರವಂತರ ಸೇವಾ ಸಂಘ ಏರ್ಪಡಿಸಿದ್ದ ಜನಪದ ಕಲಾಮೇಳ ಹಾಗೂ ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಕಲೆಗಳು ಸಮೂಹ ಜೀವನ ಸಂಸ್ಕೃತಿಯ ಪ್ರತೀಕವಾಗಿವೆ. ನಾಗರಿಕತೆಯ ಹೆಸರಿನಲ್ಲಿ ನಮ್ಮ ಸಂಸ್ಕೃತಿಯ ಶಿಸ್ತು ಮರೆಯಾಗಬಾರದು. ಜನಪದ ಕಲೆಗಳನ್ನು ಉಳಿಸಿ ಬೆಳೆಸುವತ್ತ ಎಲ್ಲರೂ ಚಿತ್ತ ಹರಿಸಬೇಕಾಗಿದೆ. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಕಲೆ ಉಳಿಯುತ್ತದೆ. ದೂರದರ್ಶನ ಮಾಧ್ಯಮದ ಮೂಲಕವಾಗಿ ವೀಕ್ಷಿಸುತ್ತಿರುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ಸಂಸ್ಕೃತಿ ಪ್ರತಿಬಿಂಬವಾದರೂ ಕೆಲವೇ ದಿನಗಳಲ್ಲಿ ದೂರದರ್ಶನ ಮಾಧ್ಯಮದಿಂದಲೂ ಮನುಷ್ಯ ದೂರಕ್ಕೆ ಸರಿಯುವ ಸಂದರ್ಭಗಳಿವೆ ಎಂದ ಅವರು, ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯಗಳಿಗೆ ಸದಾ ಪ್ರೋತ್ಸಾಹಿಸೋಣ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೆದ ಮಾತನಾಡಿದರು.
ಹೋತನಹಳ್ಳಿ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೇವೆ, ಭಕ್ತಿ, ಶ್ರದ್ಧೆ, ತನ್ಮಯತೆಗಳು ಬೇಕು. ಸಂಘಟಕರು ಪ್ರಯಾಸಪಟ್ಟು ನಡೆಸುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮುದಾಯ ಸ್ಪಂದಿಸಬೇಕು. ನಿಸ್ವಾರ್ಥ ಸೇವೆ ಸಲ್ಲಿಸುವ ಸಂಘಟಕರು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ಗುರುವಂದನೆ
ಶಿದ್ಧೇಶ್ವರ ಪುರವಂತರ ಸೇವಾ ಸಂಘದ ಅಧ್ಯಕ್ಷರಾಗಿ, ಜಾನಪದ ಲೋಕ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವೀರಗಾಸೆ ಕಲಾವಿದ ಗಂಗಾಧರಪ್ಪ ಜವಳಿ ಹಾಗೂ ಅವರ ಧರ್ಮಪತ್ನಿ ದ್ರಾಕ್ಷಾಯಣಮ್ಮ ಅವರನ್ನು ಸಂಘದ ಉಪಾಧ್ಯಕ್ಷ ಶಿವಪುತ್ರಪ್ಪ ಶೆಟ್ಟರ ಹಾಗೂ ಕಾರ್ಯದರ್ಶಿ ವೀರಭದ್ರಪ್ಪ ಶೆಟ್ಟರ ಗುರುವಂದನೆ ಸಲ್ಲಿಸಿ ಸನ್ಮಾನಿಸಿದರು.
ಗ್ರಾಪಂ ಅಧ್ಯಕ್ಷೆ ಮಮತಾ ಮಡಿವಾಳರ, ಉಪಾಧ್ಯಕ್ಷ ಪುಟ್ಟಪ್ಪ ಬಂಕೊಳ್ಳಿ, ಗಣ್ಯರಾದ ಮುರಿಗೆಪ್ಪ ಡಂಬಳಪ್ಪನವರ, ಶೇಖಪ್ಪ ಶೆಟ್ಟರ, ಮುರಿಗೆಪ್ಪ ಶೆಟ್ಟರ, ಬಸವರಾಜ ಜವಳಿ, ರುದ್ರಪ್ಪ ತಾವರಿ, ಚಂದ್ರಣ್ಣ ಗೂಳಿ, ಗುರುಲಿಂಗಪ್ಪ ಚಿಕ್ಕೇರಿ, ಎಫ್.ಎಂ. ಕಮ್ಮಾರ, ಶಿವಪುತ್ರಪ್ಪ ಶೆಟ್ಟರ ಇತರರು ಇದ್ದರು. ಉಪನ್ಯಾಸಕ ಎ.ಎಸ್. ಜಗದೀಶಪ್ಪ ಸ್ವಾಗತಿಸಿದರು. ಬಸವರಾಜ ಜಂಗಿನವರ ನಿರೂಪಿಸಿದರು.
ಮೆರವಣಿಗೆ
ಕುಮಾರೇಶ್ವರ ಪುರವಂತರ ಸೇವಾ ಸಂಘ, ಗುರುಸಿದ್ಧ ರಾಜಯೋಗೀಂದ್ರ ಪುರವಂತರ ಸೇವಾ ಸಂಘ, ವಾಲ್ಮೀಕಿ ಡೊಳ್ಳಿನ ಸಂಘ, ಮಾಲತೇಶ ಡೊಳ್ಳಿನ ಸಂಘ, ಮಾರುತಿ ಭಜನಾ ಸಂಘ, ಕಲ್ಮೇಶ್ವರ ಭಜನಾ ಸಂಘ, ವಾಲ್ಮೀಕಿ ಭಜನಾ ಸಂಘ, ಹನುಮಂತಪ್ಪ ಭಜಂತ್ರಿ, ದುರ್ಗಾದೇವಿ ಝಾಂಜ ಮೇಳದ ಕಲಾವಿದರು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೀಡಿದ ಕಲಾ ಪ್ರದರ್ಶನದ ಮೆರವಣಿಗೆ ಆಕರ್ಷಕವಾಗಿತ್ತು.
Advertisement