ಅಕ್ಷಯಪಾತ್ರೆ ಈ ಧಾರ್ಮಿಕ ಪಾಠಶಾಲೆ

Updated on: 

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ. 1
ಸರ್ಕಾರದ ಅನುದಾನ ಪಡೆಯದೇ ಸಾರ್ವಜನಿಕರ ಸಹಕಾರದಿಂದ ಪಟ್ಟಣದ ಕುಮಾರೇಶ್ವರ ಧಾರ್ಮಿಕ ಪಾಠಶಾಲೆ 44 ವರ್ಷಗಳಿಂದ ಬಡ ಕುಟುಂಬದ ಹಿನ್ನೆಲೆಯಳ್ಳ ಮಕ್ಕಳಿಗೆ ಉಚಿತ ಊಟ, ವಸತಿ ಸೇರಿದಂತೆ ಶಿಕ್ಷಣ ಸೌಲಭ್ಯ ಒದಗಿಸುವ ಮೂಲಕ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರುತ್ತಿದೆ.
ಬಡ ಮಕ್ಕಳಿಗೆ ವಸತಿ, ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಕೋಟಿಗಟ್ಟಲೇ ಹಣ ವ್ಯಯಿಸಿ ಸಕಲ ಸೌಲಭ್ಯ ಒದಗಿಸಿದ್ದರೂ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಕೊರತೆಯಿದೆ ಎಂಬ ಕೂಗಿದೆ. ಆದರೆ, ಇಲ್ಲಿನ ಧಾರ್ಮಿಕ ಪಾಠಶಾಲೆ ಸಾರ್ವಜನಿಕರ ಸಹಕಾರ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಬಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಸೇವೆಯಲ್ಲಿ ತೊಡಗಿಕೊಂಡಿದೆ.
1968ರಲ್ಲಿಯೇ ಪ್ರಾರಂಭ: ಹಾನಗಲ್ಲ ಕುಮಾರಶ್ರೀಗಳ ಗರಡಿಯಲ್ಲಿ ಬೆಳೆದ ಬಿಜಾಪುರ ಜಿಲ್ಲೆಯ ಸಿಂದಗಿ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು ಧಾರ್ಮಿಕ ಪಾಠಶಾಲೆ ಸ್ಥಾಪನೆ ರೂವಾರಿಗಳು, ಹಾವೇರಿ, ಗದಗ ಇನ್ನಿತರ ನಗರಗಳಲ್ಲಿ ಪಾಠಶಾಲೆ ಆರಂಭಿಸಿದ ಶ್ರೀಗಳು ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶ್ರೀಗಳ ಲಿಂಗೈಕ್ಯದ ಬಳಿಕವೂ ಎದೆಗುಂದದ ಸಾಧಕರು ತಮ್ಮ ಪರಿಶ್ರಮ ಧಾರೆ ಎರೆದು ಇಂದಿಗೂ ಪಾಠಶಾಲೆಗಳನ್ನು ಜೀವಂತವಾಗಿಟ್ಟಿದ್ದಾರೆ.
110ಕ್ಕೂ ಹೆಚ್ಚು ವಿದ್ಯಾರ್ಥಿಗಳು  5ನೇ (11ವರ್ಷ ಮೇಲ್ಪಟ್ಟ) ತರಗತಿಯ ಮಕ್ಕಳಿಗೆ ಪಾಠಶಾಲೆಯಲ್ಲಿ ಪ್ರವೇಶವಿದೆ. ಪಟ್ಟಣದಲ್ಲಿ ಪದವಿ ಹಂತದವರೆಗೂ ಶೈಕ್ಷಣಿಕ ಸೌಲಭ್ಯ ನೀಡುತ್ತದೆ. ಪೂಜೆಗೆ ತೆರಳಿದ ಸಂದರ್ಭದಲ್ಲಿ ಭಕ್ತರು ನೀಡುವ ಹಣದಿಂದಲೇ ಶಾಲಾ ಶುಲ್ಕ, ಶಿಕ್ಷಣಕ್ಕೆ ಬೇಕಾದ ಸೌಲಭ್ಯ ಕಲ್ಪಿಸಿಕೊಳ್ಳಲಾಗುತ್ತದೆ. 1968ರಲ್ಲಿ ಕೇವಲ 5 ಮಕ್ಕಳಿಂದ ಪ್ರಾರಂಭವಾದ ಧಾರ್ಮಿಕ ಶಾಲೆಯಲ್ಲಿ ಪ್ರಸಕ್ತ ವರ್ಷ 110 ಜಂಗಮ ವಟುಗಳಿದ್ದಾರೆ.
ಶಿಸ್ತುಬದ್ಧ ಜೀವನ: ಲಕ್ಷಗಟ್ಟಲೇ ಹಣವ್ಯಯಿಸಿ ಆತ್ಯಾಧುನಿಕ ಸೌಲಭ್ಯವಿರುವ ವಸತಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕೆಂಬ ಪರಿಪಾಠ ಇತ್ತೀಚೆಗೆ ಪಾಲಕರಲ್ಲಿ ಮೂಡುತ್ತಿದೆ. ಇಲ್ಲಿನ ಪಾಠಶಾಲೆಯಲ್ಲಿ ಶಿಸ್ತುಬದ್ಧ ಜೀವನಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಬೆಳಗ್ಗೆ 5ಕ್ಕೆ ಆರಂಭವಾಗುವ ವಿದ್ಯಾರ್ಥಿಗಳ ದಿನಚರಿ ರಾತ್ರಿ 10ಕ್ಕೆ ಮುಕ್ತಾಯಗೊಳ್ಳುತ್ತದೆ. ಬೆ. 5ರಿಂದ 6 ಸ್ನಾನ, ಪೂಜೆ, 6ರಿಂದ 7 ವೈದಿಕ ಪಠನ, 7ರಿಂದ 9 ಶಾಲಾ ಅಧ್ಯಯನ. ಬಳಿಕ ಉಪಹಾರ ಮುಗಿಸಿ ಶಾಲೆಗೆ ತೆರಳುವ ಮಕ್ಕಳು ಸಂಜೆ 5ಕ್ಕೆ ಮರಳುವರು. 6ರಿಂದ 7 ಜ್ಯೋತಿಷ್ಯ ಅಧ್ಯಯನ ಬಳಿಕ ಶಾಲಾ ಪಾಠಗಳ ಅಧ್ಯಯನ ನಡೆಯುತ್ತಿದೆ. ಹೀಗಾಗಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸರ್ವಧರ್ಮ ಭಿಕ್ಷೆ: ಇಲ್ಲಿನ ವಿದ್ಯಾರ್ಥಿಗಳು ಪಟ್ಟಣದಲ್ಲಿ ನಡೆಸುವ ಕಂತಿಭಿಕ್ಷೆ(ಕೆಲವೊಮ್ಮೆ ಕೋರಧಾನ್ಯದ)ಯಿಂದಲೇ ತುತ್ತಿನ ಚೀಲ ಭರ್ತಿಯಾಗುವುದು. ಪಟ್ಟಣದಲ್ಲಿರುವ ಎಲ್ಲ ಧರ್ಮಿಯರೂ ಕಂತಿಭಿಕ್ಷೆ ನೀಡುವುದು ಸರ್ವೇಸಾಮಾನ್ಯ. ಸರತಿಯಂತೆ ಪ್ರತಿನಿತ್ಯ 12ಕ್ಕೂ ಹೆಚ್ಚು ಮಕ್ಕಳು ಪಟ್ಟಣದಲ್ಲಿ ಭಿಕ್ಷಾಟನೆ ನಡೆಸುವ ಮೂಲಕ ತರುವ ಪ್ರಸಾದವೇ ರಾತ್ರಿಯವರೆಗೂ ಪಾಠಶಾಲೆಯಲ್ಲಿನ ವಿದ್ಯಾರ್ಥಿಗಳ ಊಟಕ್ಕೆ ಸಾಕಾಗುತ್ತದೆ.
ಓದಿದವರು ಏನಾಗಿದ್ದಾರೆ: ಪಾಠಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ದೇಶಾದ್ಯಂತ ಉತ್ತಮ ಹೆಸರು ಮಾಡಿದ್ದಾರೆ. ಕೆಲವರು ಮಠಾಧೀಶರಿದ್ದರೆ ಇನ್ನಿತರರು ಅವರ ಶಿಷ್ಯಂದಿರಾಗಿ, ಅರ್ಚಕರಾಗಿ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದಾರೆ. ಶಾಲಾ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ತಮಿಳುನಾಡು ಕುಂಭಕೋಣಂ ಹಿರೇಮಠದ ನೀಲಕಂಠ ಸಾರಂಗಿ ದೇಶಿಕೇಂದ್ರ ಶ್ರೀ ಸಹ ಇಲ್ಲಿನ ವಿದ್ಯಾರ್ಥಿ.
ಧಾರ್ಮಿಕ ಅಲೆ: ಹಾನಗಲ್ ಪಟ್ಟಣ ವಿಶ್ವವಿಖ್ಯಾತ ವ್ಯಾಪಾರಿ ಕೇಂದ್ರ. ಆದರೆ, ಪಾಠಶಾಲೆ ವಿದ್ಯಾರ್ಥಿಗಳು ಕೇಂದ್ರಕ್ಕೆ ಧಾರ್ಮಿಕ ಸುಮಾರು 800ಕ್ಕೂ ಹೆಚ್ಚು ಅಂಗಡಿ ಹಾಗೂ 15ಕ್ಕೂ ಅಧಿಕ ದೇವಾಲಯಗಳಲ್ಲಿ ಪೂಜಾ ಕೈಂಕರ್ಯವನ್ನು ವಿದ್ಯಾರ್ಥಿಗಳೇ ನಡೆಸುತ್ತಿದ್ದಾರೆ. ಹೀಗಾಗಿ ಪಟ್ಟಣದಲ್ಲಿ ಧಾರ್ಮಿಕ ಅಲೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.




ಬಡ ಕುಟುಂಬ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಶಿಕ್ಷಣ, ಆರೋಗ್ಯ, ಶಿಸ್ತುಬದ್ಧ ಜೀವನ, ಸಂಸ್ಕೃತಿ ಸಂಸ್ಕಾರಗಳಿಂದ ವಂಚಿತರಾಗಬಾರದು, ದುಶ್ಚಟಗಳಿಗೆ ಮಾರು ಹೋಗದಿರಲಿ ಎಂಬ ಉದ್ದೇಶ ಪಾಠಶಾಲೆಯದು. ಈ ದಿಸೆಯಲ್ಲಿ ವ್ಯಕ್ತಿ ಧಾರ್ಮಿಕ ತಳಹದಿಯಲ್ಲಿ ಲೌಕಿಕ ಬದುಕು ರೂಪಿಸಲಾಗುತ್ತಿದ್ದು, ಪರಿಪೂರ್ಣ ಜೀವನ ನಡೆಸಲು ಸಿದ್ಧಗೊಳಿಸಲಾಗುತ್ತದೆ.
- ರಾಚಯ್ಯ ಓದಿಸೋಮಠ,
ನಿಲಯದ ಮೇಲ್ವಿಚಾರಕ
ಮಠಗಳಿಗೆ ಕೋಟಿಗಟ್ಟಲೇ ಅನುದಾನ ಒದಗಿಸಿ ಮತಬ್ಯಾಂಕ್ ಸ್ಥಾಪಿಸಿಕೊಳ್ಳಲು ಪೈಪೋಟಿ ನಡೆಸುತ್ತಿರುವ ಜನಪ್ರತಿನಿಧಿಗಳು ಎಲೆಮರೆ ಕಾಯಿಯಂತೆ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸುತ್ತಿರುವ ಇಂಥ ಧಾರ್ಮಿಕ ಪಾಠಶಾಲೆಗಳಿಗೆ ನಿವೇಶನ, ಕಟ್ಟಡ, ಅನುದಾನ ಒದಗಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ. ವೀರಶೈವ ಮತ ಪಡೆದು ಅಧಿಕಾರಕ್ಕೆ ಬಂದಿರುವವರು ಈ ಕುರಿತು ಆತ್ಮ ವಿಮರ್ಶೆ ಮಾಡಿಕೊಳ್ಳಲಿ.
- ಗಂಗಣ್ಣ ಎಲಿ,
ಕೃಷಿಕ ಸಮುದಾಯದ ಮುಖಂಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com