ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.2
ನಗರದ ಈಜುಗೊಳವನ್ನು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಕಳೆದ 10-15 ದಿನಗಳಿಂದ ನೀರನ್ನು ಸ್ವಚ್ಛಗೊಳಿಸುತ್ತಿಲ್ಲ ಎಂದು ಆರೋಪಿಸಿದ ಇಲ್ಲಿನ ನಾಗರಿಕರು ಈಜುಗೊಳದ ಎದುರೇ ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದೆರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಈಜುಗೊಳ ಒಂದಿಲ್ಲೊಂದು ಸುದ್ದಿ ಮಾಡುತ್ತಲೇ ಬಂದಿದೆ. ಕಳೆದ 6 ತಿಂಗಳಿಂದ ಈಜುಗೋಳದ ನಿರ್ವಹಣೆ ಸಮರ್ಪಕವಾಗಿಲ್ಲ. ಇದರಿಂದಾಗಿ ಈಜುಗೊಳಕ್ಕೆ ಆಗಮಿಸುವ ನಾಗರಿಕರು ವಿವಿಧ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಚ್ಛತೆ ಕೈಗೊಳ್ಳಿ: ಪ್ರತಿಭಟನೆ ನೇತೃತ್ವ ವಹಿಸಿದ್ದ ಶಿವಣ್ಣ ಬಸೇಗಣ್ಣಿ ಮಾತನಾಡಿ, ಪ್ರಸಕ್ತ ಈಜುಗೊಳದ ನೀರನ್ನು ಕಳೆದ 2ತಿಂಗಳಿಂದಲೂ ಸ್ವಚ್ಛಗೊಳಿಸಿಲ್ಲ. ಅಲ್ಲದೇ ಕೆಲ ಬಗೆಯ ರಾಸಾಯನಿಕಗಳಿಂದ ನೀರಿನ ಶುದ್ದೀಕರಣಗೊಳಿಸುವ ಕ್ರಮವನ್ನೂ ಕೈಬಿಡಲಾಗಿದೆ.
ಇದರಿಂದಾಗಿ ಇಲ್ಲಿನ ನೀರು ಕಶ್ಮಲಗಳಿಂದ ಕೂಡಿದೆ. ಇಲ್ಲಿ ಸ್ನಾನ ಮಾಡಿದ ಹಲವರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದರಿಂದ ಬೇಸತ್ತು ಬಹುತೇಕ ಜನ ಈಜುಗೊಳಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ ಎಂದು ದೂರಿದರು.
ಸಮರ್ಪಕ ನೀರಿಲ್ಲ: ಡಾ. ರವಿ ಮಲ್ಲಾಡದ ಮಾತನಾಡಿ, ಈಜುಗೊಳದಲ್ಲಿ ನಿಗದಿತ ಮಟ್ಟಕ್ಕಿಂತ ಕಡಿಮೆ ನೀರಿದೆ. ಇದರಿಂದಾಗಿ ಈಜಲಾಗುತ್ತಿಲ್ಲ. ಅಲ್ಲದೇ ಇಲ್ಲಿನ ನೀರನ್ನು ಸಮರ್ಪಕವಾಗಿ ಶುದ್ಧೀಕರಣಗೊಳಿಸದೇ ಇರುವುದರಿಂದ ಚರ್ಮ ಖಾಯಿಲೆ ಹಾಗೂ ಸಾಮಾನ್ಯ ಕಾಯಿಲೆಗಳು ಹರಡುತ್ತಿವೆ.
ಅಲ್ಲದೇ ನೀರಿನಲ್ಲಿರುವ ಕಶ್ಮಲಗಳ ನಿರ್ಮೂಲನೆಗೆ ವಿವಿಧ ರಾಸಾಯನಿಕಗಳನ್ನು ಬಳಸಬೇಕಾದುದು ಅಗತ್ಯ. ಆದರೆ, ಇದರ ಪ್ರಮಾಣವನ್ನು ನಿಗದಿತವಾಗಿ ಬಳಸಬೇಕಾಗುತ್ತದೆ. ಆದರಿಲ್ಲಿ ಅಧಿಕ ಇಲ್ಲವೇ ಅತಿ ಕಡಿಮೆ ಪ್ರಮಾಣದ ಬಳಕೆಯಿಂದಾಗಿ ತಲೆಗೂದಲು ಉದುರುವ ಅಪಾಯ ಎದುರಿಸಬೇಕಾಗಿದೆ.
ಇಲ್ಲಿನ ಈಜುಗೊಳಕ್ಕೆ ನಿಗದಿತ ನೀರಿನ ಮೂಲವಾಗಿ 1 ಕೊಳವೆ ಬಾವಿ ಇದ್ದರೂ ಅದರ ಅಸಮರ್ಪಕ ನಿರ್ವಹಣೆಯಿಲ್ಲದೆ ನಾಗರಿಕರು ಈಜಲು ಬಾರದೇ ಪರಿತಪಿಸುವಂತಾಗಿದೆ ಎಂದು ಆರೋಪಿಸಿದರು.
2-3 ದಿನದೊಳಗೆ ಕ್ರಮ: ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಮುತ್ತು ಕಾಮಾಚ್ಚಿ ಮಾತನಾಡಿ, ಈಗಾಗಲೇ ಈಜುಗೋಳಕ್ಕೆ ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿ ವೈಫಲ್ಯದಿಂದ ಈಜುಗೊಳಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತಿಲ್ಲ. ಅಲ್ಲದೇ ಇದೇ ಆವರಣದಲ್ಲಿ ಇನ್ನೊಂದೆಡೆ ಜಲತಜ್ಞರ ನಿರ್ದೇಶನದ ಮೇರೆಗೆ ಸೂಕ್ತ ಸ್ಥಳದಲ್ಲಿ ಮತ್ತೊಂದು ಕೊಳವೆ ಬಾವಿ ಕೊರೆಯುವ ಕುರಿತಂತೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅವರ ಅನುಮತಿ ಪಡೆದು 2-3 ದಿನಗಳೊಳಗಾಗಿ ಈಜುಗೊಳಕ್ಕೆ ನೀರು ಸರಬರಾಜು ಹಾಗೂ ನೀರಿನ ಸ್ವಚ್ಛತೆಗೆ ಗಮನ ನೀಡುವುದಾಗಿ ಭರವಸೆ ನೀಡಿದರು. ನಾಲ್ಕು ದಿನಗಳೊಳಗಾಗಿ ಈಜುಗೋಳದ ಸಮಸ್ತ ತೊಂದರೆ ನಿವಾರಿಸುವಂತೆ ಎಚ್ಚರಿಸಿದ ನಾಗರಿಕರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ವಿ.ಎಂ. ಪತ್ರಿ, ಸಿದ್ದಪ್ಪ ಲಿಂಗಮ್ಮನವರ, ಡಾ. ರಾಜಕುಮಾರ ಮರೋಳ, ಡಾ. ಭಗವತಿ, ಈಶ್ವರ ಪತ್ರಿ, ಕಿರಣ ಅಂಕಲಕೋಟಿ, ಸಿ.ಆರ್. ಪಾಟೀಲ ಇನ್ನಿತರರು ಪಾಲ್ಗೊಂಡಿದ್ದರು.