ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.5
This is an wonderful project, If this Bridge was built there is a free power and signals on that Bridge. The project name is Indo-Srilanka Power Generating Project. it was done by St. Joseph high School Tamilnadu.
ಇದೇನಪ್ಪಾ ಅಂದಿರಾ? ಪ್ರಸಕ್ತ ಹಾವೇರಿ ನಗರದಲ್ಲಿ ನಡೆಯುತ್ತಿರುವ 5 ದಿನಗಳ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳದಲ್ಲಿ ತಮಿಳುನಾಡಿನ ವಿದ್ಯಾರ್ಥಿಗಳು ತಯಾರಿಸಿದ ಇಂಡೋ-ಶ್ರೀಲಂಕಾ ಮಧ್ಯದ ಸೇತುವೆಯ ಮಾದರಿ ಕುರಿತಂತೆ ನಿರರ್ಗಳವಾಗಿ ವಿವರಿಸಿದ ಒಂದು ಪರಿ.
ಇದೇ ಮೊದಲ ಬಾರಿಗೆ ಹಾವೇರಿ ಜಿಲ್ಲೆಗೆ ಕೊನೆ ಕ್ಷಣದಲ್ಲಿ ಒಲಿದು ಬಂದ ದ. ಭಾರತ ವಿಜ್ಞಾನ ಮೇಳ ಪ್ರದರ್ಶನಕ್ಕೆ ಪ್ರತಿದಿನ ಕನಿಷ್ಠ 10 ಸಾವಿರ ಮಕ್ಕಳ ಆಗಮನ ನಿರೀಕ್ಷಿಸಿದ್ದವರಿಗೆ ದುಪ್ಪಟ್ಟಾಗಿರುವುದು ಒಂದೆಡೆ ಸಂತಸ ಮತ್ತೊಂದೆಡೆ ಆತಂಕ.
ದ. ಭಾರತ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳಿಂದ ಆಗಮಿಸಿದ ಸುಮಾರು 162 ಮಾದರಿಗಳು ಇದರಲ್ಲಿ ಪ್ರದರ್ಶನಗೊಳ್ಳುತ್ತಿವೆ. ಮೇಳದಲ್ಲಿ ಶಿಕ್ಷಕರಿಗೂ ಅವಕಾಶವಿದೆ. ಅಲ್ಲದೇ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ತಂಡವಾಗಿ ಇದರಲ್ಲಿ ಮಾದರಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಇಲ್ಲಿ ಬಂದಿರುವವರೆಲ್ಲಾ ವಿವಿಧ ಹಂತ, ಶ್ರೇಣಿಗಳಲ್ಲಿ ವಿಜೇತರಾಗಿ ಸೆಮಿಫೈನಲ್ ಹಂತದಲ್ಲಿರುವವರೆಂಬುದೇ ಸಂತಸದ ವಿಚಾರ.
ಭಿನ್ನ, ವಿಭಿನ್ನ: ಇಲ್ಲಿ ಆಗಮಿಸಿರುವ ಮಾದರಿಗಳಲ್ಲಿ ಒಂದಕ್ಕಿಂತ ಇನ್ನೊಂದು ಭಿನ್ನ, ವಿಭಿನ್ನ. ನೋಡುತ್ತ ಹೋದಂತೆ ನಿರೀಕ್ಷೆಯ ಭಾವನೆಯನ್ನು ವಿಜ್ಞಾನ ಪ್ರದರ್ಶನ ಉಂಟು ಮಾಡಿ ಮೂಕವಿಸ್ಮಿತರನ್ನಾಗಿಸುತ್ತದೆ. ಅಡುಗೆ ಮನೆಯಿಂದ ಹೊರಬರುವ ಹಸಿ ತ್ಯಾಜ್ಯದಿಂದ, ಸೈಕಲ್ ತುಳಿಯುವ ಮೂಲಕ, ಮನೆ ಸುತ್ತ ಬೀಸುವ ಗಾಳಿಯಿಂದ ಅತಿ ಕಡಿಮೆ ಖರ್ಚಿನಲ್ಲಿ ವಿದ್ಯುಚ್ಛಕ್ತಿ ಉತ್ಪಾದಿಸುವ, ಇಲ್ಲವೇ ಮಕ್ಕಳಾಟಕ್ಕಾಗಿ ಸಾರ್ವಜನಿಕ ಗಾರ್ಡನ್ನಲ್ಲಿ ಅಳವಡಿಸಿರುವ ಕಬ್ಬಿಣದ ಬಾರ್ನಿಂದಲೇ ವಿದ್ಯುತ್ ಸಹಾಯವಿಲ್ಲದೇ ಆಟವಾಡುವ ಮೂಲಕ ನೀರನ್ನು ಭೂಮಿಯಿಂದ ಮೇಲೆತ್ತುವ ಮೂಲಕ ವಿದ್ಯುತ್ ಬಳಕೆ ಇಲ್ಲದೇ ಹತ್ತು, ಹಲವು ಪ್ರಯೋಗಗಳು ಮನಮೋಹಕ ಎನಿಸಿದವು.
ಪರಿಸರ ಪ್ರೀತಿ: ಬಹುತೇಕ ಪ್ರಯೋಗ ಹಾಗೂ ಮಾದರಿಗಳು ಪರಿಸರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ವಿಜ್ಞಾನ ಮೇಳದ ವಿಶೇಷತೆ ಎಂದರೆ ತಪ್ಪಾಗಲಾರದು. ಪಾಂಡಿಚೇರಿಯ ವಿದ್ಯಾರ್ಥಿನಿಯೋರ್ವಳು ಸಮುದ್ರದ ದಡದಲ್ಲಿ ತೇಲುವ ತೈಲವನ್ನು ಆಧುನಿಕ ಮಾದರಿಯಲ್ಲಿ ಸಂಗ್ರಹಿಸುವುದು, ಮತ್ತೆ ಬಳಸುವುದು, ಇದರೊಂದಿಗೆ ಸಾಗರ ಜೀವಿಗಳನ್ನು ಯಾವ ರೀತಿ ಸಂರಕ್ಷಿಸಬಹುದು ಹಾಗೂ ಪರಿಸರ ಸಮತೋಲನೆಯನ್ನು ಹೇಗೆ ಕಾಯ್ದುಕೊಳ್ಳಬಹುದೆಂಬುದನ್ನು ಅತ್ಯಂತ ಸರಳವಾಗಿ ತಿಳಿಸಿಕೊಡುತ್ತಿದ್ದುದು ಅಚ್ಚರಿ ಮೂಡಿಸಿತು.
ಗಣಿತ, ವಿಜ್ಞಾನ, ತಂತ್ರಜ್ಞಾನ, ಉಪಗ್ರಹ ಆಧಾರಿತ ಮಾಹಿತಿ ಮತ್ತು ಸಂವಹನ, ಭೂಗೋಳ, ಸಾಗರದ ನೀರಿನ ಅಲೆಗಳಿಂದ ವಿದ್ಯುತ್ ಉತ್ಪಾದನೆ, ಜೈವಿಕತೆ ಒತ್ತು ಹೀಗೆ ಹಲವಾರು ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವ ಮಾದರಿಗಳು ಪಾಲ್ಗೊಂಡಿದ್ದವು.
162 ಮಾದರಿಗಳು: ಕರ್ನಾಟಕದಿಂದ 13 ಮಾದರಿಗಳು ಗುಂಪು ವಿಭಾಗದಲ್ಲಿ, ವೈಯಕ್ತಿಕ ವಿಭಾಗದಲ್ಲಿ 15 ಹಾಗೂ ಶಿಕ್ಷಕರ ವಿಭಾಗದಲ್ಲಿ 9 ಒಟ್ಟು 37 ಮಾದರಿಗಳು, ಆಂಧ್ರಪ್ರದೇಶ 43, ಕೇರಳ 35, ತಮಿಳುನಾಡಿನ 29 ಹಾಗೂ ಪಾಂಡಿಚೇರಿಯಿಂದ 18 ಮಾದರಿಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪಾಲ್ಗೊಂಡು ಜನಮನ ಸೂರೆಗೊಂಡವು.
- ಕಿರಣ ಮಾಸಣಗಿ