ಹಾನಗಲ್ಲ: ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿ ಕೊಡಮಾಡುವ 2000-2002ನೇ ಸಾಲಿನ ಕಣವಿ ಕಾವ್ಯ ಪುರಸ್ಕಾರ ರಾಯಚೂರಿನ ಯುವಕವಿ ಶಿವರಾಜ ಬೆಟ್ಟದೂರು ಇವರ ಮೊದಲ ಕವನ ಸಂಕಲನ 'ಈ ಲೋಕದ ಇನ್ನೊಂದು ಗಿಡಕ್ಕೆ' ಸಂದಿದೆ. ಸೈಫ್ ಜಾನ್ಸೆ ಕೊಟ್ಟೂರು ಇವರ ಅಯ್ಯಂಗಾರಿಯ ಹತ್ತು ಪೈಸೆ ಬ್ರೆಡ್ಡು ಹಾಗೂ ವಿಠ್ಠಲ ದಳವಾಯಿ ಅವರ ಬೋಧಿ ನೆರಳಿನ ದಾರಿ ಕವನ ಸಂಕಲನಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ. ಕವಿ, ವಿಮರ್ಶಕರಾದ ಜಿ.ಕೆ. ರವೀಂದ್ರಕುಮಾರ ಹಾಗೂ ತಾರಿಣಿ ಶುಭದಾಯಿನಿ ತೀರ್ಪುಗಾರರಾಗಿದ್ದರು. ಬರುವ ಮಾರ್ಚ್ನಲ್ಲಿ ಧಾರವಾಡದಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ. ಪುರಸ್ಕಾರವು 5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಅಂತೆಯೇ, ಮೆಚ್ಚುಗೆ ಬಹುಮಾನವಾಗಿ ಪುಸ್ತಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದೂ ಸಂಚಾಲಕ ವಿಜಯಕಾಂತ ಪಾಟೀಲ ತಿಳಿಸಿದ್ದಾರೆ.
ಮಹಾಂತ ಶ್ರೀ ನಿಧನ: ಸಂತಾಪ
ಶಿಗ್ಗಾಂವಿ: ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ಡಾ.ಮಹಾಂತ ಶ್ರೀಗಳ ಅಗಲಿಕೆ ಸಮಾಜಕ್ಕೆ ಭರಿಸಲಾರದ ನಷ್ಟ ಉಂಟು ಮಾಡಿದೆ. ಶ್ರೀಗಳ ಸಮಾಜಸೇವೆ ಅನುಪಮವಾದುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಂಸದ ಮಂಜುನಾಥ ಕುನ್ನೂರ ತಿಳಿಸಿದರು. ಸಮಾಜ ಸಂಘಟನೆಗಾಗಿ ಶ್ರೀಗಳು ಮಾಡಿದ ಮಾರ್ಗದರ್ಶನ ಅಮೂಲ್ಯವಾದುದು. ಪಂಚಮಸಾಲಿ ಸಮಾಜದ ಏಳ್ಗೆಗೆ ಶ್ರೀಗಳು ಹಾಕಿಕೊಟ್ಟ ಧ್ಯೇಯವಾಕ್ಯವೇ ಇಂದಿಗೂ ದಾರಿದೀಪ. ಸಮಾಜ ಕಟ್ಟುವಲ್ಲಿ ಹಾಗೂ ಅದನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಅವರ ಶ್ರಮ ಮಾದರಿಯಾಗಿದೆ ಎಂದು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
11ರಂದು ಪ್ರತಿಭಟನೆ
ಹಾವೇರಿ: ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕಗಳಿಂದ ರೈತರಿಗೆ ಸಮರ್ಪಕವಾಗಿ ಬೆಳೆವಿಮೆ ವಿತರಿಸುವಂತೆ, ತುಂಗಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ಫೆ. 11ರಂದು ಪ್ರತಿಭಟನೆ ನಡೆಸುವುದಾಗಿ ಪ್ರಕಟಣೆ ತಿಳಿಸಿದೆ.