ಹಿರೇಕೆರೂರು: ಸಮಾಜದಲ್ಲಿ ಜಾತಿಗಿಂತ ನೀತಿ ಮುಖ್ಯ. ಜಾತಿಯನ್ನು ಮೀರಿದ್ದು ತತ್ವ. ಜಗಜ್ಯೋತಿ ಬಸವಣ್ಣನವರು ತತ್ವಕ್ಕಾಗಿ ಬದುಕಿದರು. ನಾವು ಮಾಡುವ ಕಾಯಕ ತತ್ವಕ್ಕೆ ಬದ್ಧರಾಗಿ ತತ್ವಾಧಾರಿತ ಜೀವನ ನಡೆಸುವಂತೆ ತಂಗಡಗಿ ಅನ್ನದಾನ ಭಾರತಿ ಹಡಪದ ಅಪ್ಪಣ್ಣ ಶ್ರೀಗಳು ಹೇಳಿದರು.
ತಾಲೂಕಿನ ರಟ್ಟಿಹಳ್ಳಿ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಮಿತಿ ನಡೆಸಿದ ನಿಜಶರಣ ಹಡಪದ ಅಪ್ಪಣ್ಣ, ಲಿಂಗಮ್ಮ ತಾಯಿ ಅವರ ಜಯಂತ್ಯುತ್ಸವ ಹಾಗೂ ಹಡಪದ ಅಪ್ಪಣ್ಣ ಸಮಾಜ ಬಾಂಧವರ ಜನಜಾಗೃತಿ ಸಮಾವೇಶ, ತಾಲೂಕು ಘಟಕದ ಉದ್ಘಾಟನೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಡಪದ ಸಮಾಜದ ಜನತೆ ಸಂಕುಚಿತ ಮನೋಭಾವ ಕೈಬಿಡಬೇಕು. ವಿಶಾಲತೆಯ ಕಡೆಗೆ ಗಮನ ಹರಿಸಬೇಕು. ಸಾತ್ವಿಕತೆಯಿಂದ ಆಧ್ಯಾತ್ಮಿಕತೆ ಕಡೆಗೆ ಸಾಗಬೇಕು. ಸುಶಿಕ್ಷಿತರಾಗುವ ಮೂಲಕ ತುಳಿತಕ್ಕೊಳಗಾದವರೆಲ್ಲರೂ ನಿರಂತರ ಹೋರಾಟದ ಮೂಲಕ ಮುಖ್ಯವಾಹಿನಿಗೆ ಬರಬೇಕು. ಲಿಂಗ ಅರಿತವರ ಸ್ವತ್ತಾಗಿದೆ. ಲಿಂಗದ ಅನುಸಂಧಾನವೇ ಜಂಗಮ ಎಂದರು.
ರಾಜಕಾರಣಿಗಳು ಸುಳ್ಳಿನ ಸರದಾರರಾಗಿದ್ದಾರೆ. ವೇದಿಕೆಯಲ್ಲಿ ಹೇಳುವುದೊಂದು, ಮಾಡುವುದು ಮತ್ತೊಂದು. ಚುನಾವಾಣೆ ಸಂದರ್ಭದಲ್ಲಿ ಅಣ್ಣ-ತಮ್ಮ, ಅಕ್ಕ-ತಂಗಿ ಎಂದೇ ಕಾಲಿಗೆ ಬೀಳುತ್ತಾರೆ. ಆಮೇಲೆ ಯಾರೊಬ್ಬರೂ ಹತ್ತಿರ ಬಾರದೆ ವಂಚಿಸುತ್ತಾರೆ. ಅಂಥವರಿಗೆ ತಕ್ಕ ಪಾಠ ಕಲಿಸಿ. ನಿಮ್ಮ ಮತವನ್ನು ಹಣಕ್ಕೆ ಹೆಂಡಕ್ಕೆ ಮಾರದಿರಿ ಎಂದು ಮನವಿ ಮಾಡಿದರು.
ಸಮಿತಿ ರಾಜ್ಯಾಧ್ಯಕ್ಷ ಅಣ್ಣಾರಾವ ನರಿಹೊಳೆ ಉದ್ಘಾಟಿಸಿದರು. ತಾಲೂಕಾಧ್ಯಕ್ಷ ವೀರಪ್ಪ ಕಟ್ಟಿಮನಿ ಅದ್ಯಕ್ಷತೆ ವಹಿಸಿದ್ದರು. ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶಿವಲಿಂಗ ಶ್ರೀ, ತಿಪ್ಪಾಯಿಕೊಪ್ಪದ ವಿರೂಪಾಕ್ಷ ಶ್ರೀ, ಬಿ.ಎಚ್. ಬನ್ನಿಕೋಡ, ಯು.ಬಿ. ಬಣಕಾರ, ಡಿ.ಎಂ. ಸಾಲಿ, ಪಾಲಾಕ್ಷಗೌಡ ಪಾಟೀಲ, ಪಿ.ಡಿ. ಬಸನಗೌಡ್ರ, ನಿಂಗಪ್ಪ ಚಳಗೇರಿ, ಎಚ್.ಎಂ. ಅಶೋಕ, ಬಸವರಾಜ ಬೇವಿನಹಳ್ಳಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.