ಹಾನಗಲ್ಲ: ಇಲ್ಲಿನ ಬಿಜೆಪಿ ವತಿಯಿಂದ ಫ್ರೆಂಡ್ಸ್ ಅಸೋಸಿಯೇಶನ್ ಸಭಾಭವನದಲ್ಲಿ ಫೆ. 11ರಂದು ಬೆಳಗ್ಗೆ 10ಕ್ಕೆ ಬಿಜೆಪಿ ಸಂಸ್ಥಾಪಕ ಪಂಡಿತ ದೀನ ದಯಾಳ ಉಪಾಧ್ಯಾಯ ಸ್ಮರಣಾರ್ಥ ಸಮರ್ಪಣಾ ದಿನ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕೆಂದು ತಾಲೂಕಾಧ್ಯಕ್ಷ ಗುಡ್ಡಪ್ಪ ಗುಡ್ಡಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯಿಂದ ಜಾತ್ರೋತ್ಸವ
ಹಾವೇರಿ: ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಫೆ. 12ರಿಂದ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಫೆ.12ರಂದು ದೇವಿಗೆ ಉಡಿ ತುಂಬುವುದು. ಫೆ. 13ರಿಂದ ಮೂರು ದಿನಗಳ ಕಾಲ ಜಂಗಿ ನಿಕಾಲಿ ಕುಸ್ತಿ ಏರ್ಪಡಿಸಲಾಗಿದೆ. ಇದರಲ್ಲಿ ರಾಜ್ಯದ ವಿವಿಧ ಜಟ್ಟಿಗಳು, ಪೈಲ್ವಾನರು ಪಾಲ್ಗೊಳ್ಳಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆ ತಿಳಿಸಿದೆ.
ಇಂದಿನಿಂದ ಸಂಗೀತ ಕಾರ್ಯಕ್ರಮ
ಹಾನಗಲ್ಲ: ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ 122ನೇ ಜಯಂತ್ಯುತ್ಸವದ ಸಂಗೀತ ಕಾರ್ಯಕ್ರಮ ಫೆ. 11ರಿಂದ ಮೂರು ದಿನಗಳ ಕಾಲ ಅವರ ಜನ್ಮಭೂಮಿ ಹಾನಗಲ್ಲ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಜರುಗಲಿವೆ. ಹಕ್ಕಲಬಸವೇಶ್ವರ ಮಹಾರಥೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ, ನೂತನ ಪ್ರಸಾದ ನಿಲಯ ಉದ್ಘಾಟನೆ ಹಾಗೂ ಧರ್ಮಸಭೆ ಜರುಗಲಿದೆ. ಫೆ. 11ರಂದು ಬೆಳಗ್ಗೆ ಪಂಚಾಕ್ಷರಿ ಗವಾಯಿಗಳವರ ಸ್ಮಾರಕ ಸಮಾಧಿಗೆ ವಿಶೇಷ ಪೂಜೆ, ಗುರುನಂಜೇಶ್ವರ ಶ್ರೀಗಳಿಂದ ನೀಲಾಂಬಿಕಾ ಪ್ರಸಾದ ನಿಲಯ ಉದ್ಘಾಟನೆ ನಂತರ ಪಂಚಾಕ್ಷರಿ ಗವಾಯಿಗಳವರ ಭಾವಚಿತ್ರದ ಮೆರವಣಿಗೆ ನಡೆಯುವದು. ಸಂಜೆ ಸಂಗೀತೋತ್ಸವವನ್ನು ಮಾಜಿ ಸಚಿವ ಸಿ.ಎಂ.ಉದಾಸಿ ಉದ್ಘಾಟಿಸುವರು. ಸಂಸದ ಶಿವಕುಮಾರ ಉದಾಸಿ, ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನರ ಅತಿಥಿಗಳಾಗಿ ಪಾಲ್ಗೊಳ್ಳುವರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಂಗೀತ ಕಾರ್ಯಕ್ರಮದಲ್ಲಿ ರೇಣುಕಾ ನಾಕೋಡ, ಮೃತ್ಯುಂಜಯ ಅಗಡಿ, ಶಂಕರ ಕಬಾಡಿ, ಅರ್ಜುನ ವಠಾರ, ಶಿವಬಸಯ್ಯ, ಎಚ್.ಪಿ. ವೆಂಕಟೇಶ, ಪಂ. ರಘುನಾಥ ನಾಕೋಡ, ಮಲ್ಲಿಕಾರ್ಜುನ ತರ್ಲಗಟ್ಟಿ, ರವಿಕಿರಣ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು.
ಸವಣೂರು: ರಕ್ತದಾನ ಶಿಬಿರ
ಸವಣೂರು: ಭಾವಸಾರ ಕ್ಷತ್ರಿಯ ಸಮಾಜದಿಂದ ನಗರದ ಶ್ರೀಹರಿ ಮಂದಿರದಲ್ಲಿ ಗುರು ನಿವೃತ್ತಿನಾಥ ಮಹಾರಾಜರ ಪುಣ್ಯತಿಥಿ ನಿಮಿತ್ತ ದಿಂಡಿ ಮಹೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಜರುಗಿತು. ಗೃಹಿಣಿಯರಾದ ವೀಣಾ ರಾಶಿನಕರ, ಪಾರ್ವತಿಬಾಯಿ ಅಚಲಕರ, ಜೊತ್ಸನಾ ಗಿತ್ತೆ ಮಹಿಳೆಯರು, ಗಿರೀಶ ಇಜಂತಕರ, ಅಣ್ಣು ರಾಶಿನಕರ, ಅಮರ ಗಿತ್ತೆ, ಸಂದೀಪ ರಾಶಿನಕರ, ಗಿರೀಶ ಬಗರೆ, ಮಹೇಶ ದೇಶಮಾನೆ, ವಿಶಾಲ ಅಚಲಕರ, ಅನೃತ ಬಗರೆ ಪುರುಷರು ರಕ್ತದಾನ ಮಾಡಿದರು.