ಶಾಸಕರ ಗೈರು: ನಿರಾಶ್ರಿತರ ಪರದಾಟ

Updated on: 

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ.15
ಮಂಗಳವಾರ ಜರುಗಿದ ಸ್ಥಳೀಯ ಪುರಸಭೆ ಸಾಮಾನ್ಯ ಸಭೆಯಲ್ಲಿ ಯಾವುದೇ ಪ್ರಮುಖ ನಿರ್ಧಾರಗಳು ಹೊರಬರದೇ ಸಪ್ಪೆ ಎನಿಸಿತು. ಬಹುಶಃ ಶಾಸಕರ ಗೈರು ಹಾಜರಿಯಲ್ಲಿ ಪುರಸಭೆ ಸಾಮಾನ್ಯಸಭೆ ನಡೆದಿರುವುದೂ ಸಹ ಇದೇ ಮೊದಲ ಬಾರಿ ಎಂದರೆ ತಪ್ಪಾಗಲಾರದು. ಫೆಬ್ರವರಿಯಲ್ಲಿ ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯಗೊಳ್ಳಲಿದ್ದು, ಚುನಾವಣೆ ಸಮೀಪಿಸುತ್ತಿದೆ. ಸದ್ಯದ ಆಡಳಿತ ಮಂಡಳಿ ಕೊನೆಯ ಸಭೆ ಇದಾಗಬಹುದೆಂದು ಅಂದುಕೊಳ್ಳಲಾಗುತ್ತಿದೆ.
ನಿರಾಶ್ರಿತರಿಗೆ ನಿರಾಸೆ: ಆಶ್ರಯ ಮನೆ ಹಂಚಿಕೆ ವಿವಾದಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪುರಸಭೆ ಆಡಳಿತ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದಲ್ಲದೇ, ಮರು ಹಂಚಿಕೆ ಮಾಡುವಂತೆ ಅರ್ಹ ಫಲಾನುಭವಿಗಳಿಂದ ಸಾಕಷ್ಟು ಪ್ರತಿಭಟನೆಗಳು ಜರುಗಿದ್ದವು. ಆದರೆ, ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಕುರಿತು ಸಾಕಷ್ಟು ಚರ್ಚೆ ನಡೆದು ಇವೆಲ್ಲ ವಿವಾದಗಳಿಗೆ ಪರಿಹಾರ ಸಿಗಬಹುದೆಂದು ನಿರೀಕ್ಷಿಸಿದ್ದ ನಿರಾಶ್ರಿತರು ಯಾವುದೇ ಚರ್ಚೆ ನಡೆಯದೇ ನಿರಾಸೆಯನ್ನುಂಟು ಮಾಡಿತು.
ಅನರ್ಹರಿಗೆ ನಿವೇಶನವಿಲ್ಲ: ಆಶ್ರಯ ಮನೆ ಹಂಚಿಕೆ ವಿವಾದ ಕುರಿತು ಒಂದೆರಡು ಮಾತುಗಳನ್ನಾಡಿದ ಮುಖ್ಯಾಧಿಕಾರಿ ಡಾ. ಮಹಾಂತೇಶ, ಪುರಸಭೆ ವತಿಯಿಂದ ಹಂಚಿರುವ ಆಶ್ರಯ ಮನೆಗಳಲ್ಲಿ ಅನರ್ಹರಿಗೆ ಹಕ್ಕುಪತ್ರ ನೀಡಲಾಗಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಈ ಕುರಿತು ಸಾಕಷ್ಟು ಪ್ರತಿಭಟನೆಗಳು ಜರುಗಿ ಸಾರ್ವಜನಿಕರಿಂದ ಮನವಿಗಳು ಬಂದಿದ್ದು, 280 ಜನ ಅರ್ಹರಿಗೆ ಮನೆ ನೀಡಲಾಗಿದೆ. ಅನರ್ಹ ಫಲಾನುಭವಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅದಕ್ಕಾಗಿ ವಿಶೇಷ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ನಾಮಫಲಕ ಹಾಕಿರಿ: ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ ಮಾತನಾಡಿ, ಪಟ್ಟಣದಲ್ಲಿರುವ ಯಾವುದೇ ರಸ್ತೆಗಳಿಗೆ ಇಂದಿಗೂ ನಾಮಫಲಕ ಅಳವಡಿಸಿಲ್ಲ. ಇಂದಿಗೂ ಪುರಾತನ ಹೆಸರುಗಳಿಂದಲೇ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ಇದರಿಂದ ಹೊರಗಿನಿಂದ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರಿಗೆ ವಿಳಾಸ ಪತ್ತೆ ಹಚ್ಚಲು ಹರಸಾಹಸಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಎಲ್ಲ ರಸ್ತೆಗಳಿಗೆ ನಾಮಫಲಕಗಳನ್ನು ಅಳವಡಿಸುವಂತೆ ಮನವಿ ಮಾಡಿದರು.
ಆಶ್ರಯ ಮನೆಗಾಗಿ ಮನವಿ: ಉಪಾಧ್ಯಕ್ಷ ಬಾಬು ಬಡಿಗೇರ ಮಾತನಾಡಿ, ಆಶ್ರಯ ಯೋಜನೆಯಡಿ ಸುಮಾರು 10 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಹ ಫಲಾನುಭವಿಗಳ ನಿವೇಶನಕ್ಕಾಗಿ ಸ್ಥಳ ಒದಗಿಸಲು ಈಗಿರುವ ನಿವೇಶನಗಳಿಗೆ ಹೊಂದಿಕೊಂಡಂತೆ ರಿ.ಸ.ನಂ. 171ರಲ್ಲಿನ 25 ಎಕರೆ ಕಂದಾಯ ಭೂಮಿಯನ್ನು ಪುರಸಭೆಗೆ ಡಿನೋಟಿಫೈ ಮಾಡಲು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಭೆ ಗಮನಕ್ಕೆ ತಂದರು. ಅಧ್ಯಕ್ಷೆ ಪಾರ್ವತಿ ಕೊಪ್ಪದ ಸಭೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಜೈತನ್ನಬಿ ಸೌದಾಗರ, ರಾಮಣ್ಣ ಉಕ್ಕುಂದ, ಅಭಿಯಂತರ ಉಮೇಶ ಇತರರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com