ಚೌಡಯ್ಯ ಪ್ರಾಧಿಕಾರ: ಸಿಎಂ ಜೊತೆ ಚರ್ಚೆ

Updated on: 

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 21
ಗಂಗಾಮತ ಸಮುದಾಯಗಳ ಅಭಿವೃದ್ಧಿಗೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರದ ರಚನೆಯ ಅಗತ್ಯತೆ ಇದ್ದು, ಈ ಕುರಿತಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ ಚರ್ಚಿಸುವುದಾಗಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ತಿಳಿಸಿದರು.
ಇಲ್ಲಿನ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿಶ್ವಾಸಾರ್ಹತೆಗೆ ಹೆಚ್ಚಿನ ಪ್ರಾಶಸ್ತ್ಯ ಪಡೆದ ಗಂಗಾಮತ ಸಮುದಾಯ ಇಂದಿಗೂ ಶೈಕ್ಷಣಿಕ ಹಾಗೂ ಆರ್ಥಿಕ ಹಿಂದುಳಿಕೆಯಿಂದಾಗಿ ಅಭಿವೃದ್ಧಿಯಲ್ಲಿ ಹಿಂದಿರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ ಎಂದರು.
ಅಭಿವೃದ್ಧಿ ಅಗತ್ಯ: ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೋಜರಾಜ ಕರೂದಿ ಮಾತನಾಡಿ, ಶರಣರು ಹೋರಾಟ ನಡೆಸಿದ್ದು ಸಾಮಾಜಿಕ ಅಭಿವೃದ್ಧಿ ಹಾಗೂ ಒಗ್ಗಟ್ಟಿಗಾಗಿ. ಅಂದು ಚೌಡಯ್ಯನವರು ಸಾಮಾಜಿಕ ಸಮಸ್ಯೆಗಳನ್ನು ವಿರೋಧಿಸಿ ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿದರು. ಆದರೆ, ಆ ಸಮಸ್ಯೆಗಳು ಇಂದಿಗೂ ನಮ್ಮೊಂದಿಗಿರುವುದು ನೋವಿನ ಸಂಗತಿ. ಇಂದು ಮನಸ್ಸುಗಳು ಕಲ್ಮಶಗಳಿಂದ ತುಂಬಿಕೊಂಡಿವೆ. ಶಿಕ್ಷಣ ಹಾಗೂ ಶರಣರ ವಚನಗಳಿಂದ ಅವುಗಳನ್ನು ಸ್ವಚ್ಛಗೊಳಿಸಬೇಕಿದೆ ಎಂದರು.
ಚೌಡಯ್ಯ ಪ್ರಾಧಿಕಾರ ರಚಿಸಿ: ರಾಜ್ಯದ ಜನತೆಗೆ ಹೆಚ್ಚಿನ ಸೌಲಭ್ಯ ಹಾಗೂ ಸವಲತ್ತುಗಳನ್ನು ಕಲ್ಪಿಸಿದ ಹೆಗ್ಗಳಿಕೆ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಜನತೆಯ ಭಾವನೆಗೆ ಹೆಚ್ಚಾಗಿ ಸ್ಪಂದಿಸಿರುವುದು ಬಿಜೆಪಿ ಸರ್ಕಾರ. ಅಲ್ಲದೇ ಗಂಗಾಮತ ಸಮುದಾಯದ ಸಮಗ್ರ ಅಭಿವೃದ್ಧಿ ಕುರಿತಂತೆ ಪ್ರಸಕ್ತ ಬಜೆಟ್‌ನಲ್ಲಿಯೇ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರ ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಮಾತನಾಡಿ, ವಚನ ಸಾಹಿತ್ಯ 12ನೇ ಶತಮಾನದ ಅಪೂರ್ವ, ಮಾರ್ಗದರ್ಶನೀಯವಾದ ಸಾಹಿತ್ಯ ಪ್ರಕಾರವಾಗಿದೆ. ಈ ವಿಶಿಷ್ಟ ಸಾಹಿತ್ಯ ಪ್ರಕಾರದಿಂದ ಸಮಾಜ ತಿದ್ದುವಲ್ಲಿ ಶರಣರು ಕಂಡುಕೊಂಡ ದಾರಿ ನಿಜಕ್ಕೂ ಅವರ್ಣನೀಯ. ಶರಣರ ನೇರ, ದಿಟ್ಟ ನುಡಿಗಳು ಸಮಾಜಕ್ಕೆ ಶಾಸನಗಳೇ ಆಗಿದ್ದವೆಂದರೇ ತಪ್ಪಾಗಲಾರದು ಎಂದರು.
ನರಸೀಪುರದ ಅಂಬಿಗರ ಚೌಡಯ್ಯ ಪೀಠದ ಪೀಠಾಧಿಕಾರಿ ಶಾಂತಮುನಿ ಶ್ರೀ ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮುನ್ನ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಚಾಲನೆ ನೀಡಿದರು.
ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರಣಿಗೆ ಸಾಗಿ ಗುರುಭವನ ತಲುಪಿತು. ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸರ್ಕಾರದ ಕಾರ್ಯದರ್ಶಿ ಮುನಿರಾಜು, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಂದ್ರ ಕಟಕೋಳ, ಹೆಚ್ಚುವರಿ ಪೊಲೀಸ್ ವರಿಷ್ಠ ಎಂ.ಎಂ. ಅಗಡಿ, ಸಮಾಜದ ಮುಖಂಡರಾದ ವಿಷ್ಣುಮೂರ್ತಿ ವಡ್ನಿಕೊಪ್ಪ, ಲಕ್ಷ್ಣಣ ಶೇಷಗಿರಿ, ಮಂಜುನಾಥ, ಪರಮೇಶಪ್ಪ ಮೇಗಳಮನಿ, ತಾಪಂ ಉಪಾಧ್ಯಕ್ಷ ಬಸಪ್ಪ ಕಳಸೂರು ಉಪಸ್ಥಿತರಿದ್ದರು.
ಎಸ್.ವಿ. ಗೌಡರ ಪ್ರಾಸ್ತಾವಿಕ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಜೆ. ಜಗದೀಶ ಸ್ವಾಗತಿಸಿದರು. ಜಗದೀಶ ಚೌಟಗಿ ನಿರ್ವಹಿಸಿದರು. ಉಪವಿಭಾಗಾಧಿಕಾರಿ ಚನ್ನಬಸಪ್ಪ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com