ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ.22
ತಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಸರ್ಕಾರದ ಯೋಜನೆಗಳನ್ನು ಪಟ್ಟಣದ ಅಭಿವೃದ್ಧಿಗಾಗಿ ತಂದಿದ್ದೇನೆ. ಈ ಸಂದರ್ಭ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿ ಸಹಕರಿಸಿದ ಪುರಸಭೆ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಸುರೇಶಗೌಡ ಹೇಳಿದರು.
ಪುರಸಭೆ ಹಾಲಿ ಸದಸ್ಯರು ಪುರಸಭೆ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದದರು.
ಶಾಶ್ವತ ಕುಡಿಯುವ ನೀರು ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಬಹುತೇಕ ಎಲ್ಲ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಪಟ್ಟಣದ ನಾಗರಿಕರಿಗೆ ಕುಡಿಯುವ ನೀರಿನ ತೊಂದ ರೆಯಾಗದಂತೆ ಕ್ರಮ ಜರುಗಿಸಿದ್ದೇನೆ ಎಂದರು. ಮಾದರಿ ಪಟ್ಟಣವನ್ನಾಗಿ ಮಾಡುವ ನಿಟ್ಟಿನಲ್ಲಿ ಇನ್ನೂ ಅಭಿವೃದ್ಧಿ ಕಾಮಗಾರಿಗಳು ಆಗಬೇಕಾಗಿದ್ದು, ಮುಂದಿನ ದಿನಗಳಲ್ಲಿಯೂ ಅಭಿವೃದ್ಧಿಗಾಗಿ ತಮ್ಮೆಲ್ಲಾ ಸಹಕಾರ ಬಯಸುತ್ತೇನೆ ಎಂದರು.
ಶಾಸಕ ಸ್ಥಾನಕ್ಕೆ ರಾಜಿನಾಮೆ: ಜ. 23ರಂದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ಬಿಜೆಪಿ ಜೊತೆ ಸಂಬಂಧವನ್ನು ಕಳಚಿ ಕೆಜೆಪಿ ಅಧಿಕೃತ ಕಾರ್ಯಕರ್ತನಾಗಿ ಮುಂದುವರೆಯಲಿದ್ದೇನೆ ಎಂದರು. ಕಾಕತಾಳೀಯ ಎಂಬಂತೆ ರಾಜಿನಾಮೆ ಸಲ್ಲಿಸುವ ಮುನ್ನಾ ದಿನವಾದ ಮಂಗಳವಾರ ಸುರೇಶಗೌಡ ರಾಜಿನಾಮೆ ಧೃಡಪಡಿಸಿಕೊಂಡ ಪುರಸಭೆ ಸದಸ್ಯರು ಸನ್ಮಾನ ಕಾರ್ಯಕ್ರಮ ಕೈಗೊಂಡಿದ್ದಾಗಿ ತಿಳಿದು ಬಂದಿದೆ.
ಮಾಜಿ ಅಧ್ಯಕ್ಷರಿಗೆ ಸನ್ಮಾನ: ಪುರಸಭೆ ಮಾಜಿ ಅಧ್ಯಕ್ಷರಾದ ಕನ್ನಪ್ಪ ಕೊಪ್ಪದ, ದಾನಪ್ಪ ಮಾಸೂರ, ಕೃಷ್ಣಾಜಿ ಶಿಂಧೆ, ಅಜೀಜ್ಸಾಬ್ ಬಳ್ಳಾರಿ, ನಿಂಗಮ್ಮ ಹೊನ್ನಾಳಿ, ರಾಮಣ್ಣ ಕೋಡಿಹಳ್ಳಿ, ಅನ್ನಪೂರ್ಣಮ್ಮ, ಶಂಬಣ್ಣ ಬಿದರಿ, ಮಾಜಿ ಉಪಾಧ್ಯಕ್ಷ ಯೂಸುಫಸಾಬ್ ಬೇಪಾರಿ, ಮುರಿಗೆಪ್ಪ ಶೆಟ್ಟರ್, ಗುಡ್ಡಪ್ಪ ಆಡಿನವರ, ಬಸವರಾಜ ಹಂಜಿ ಇನ್ನಿತರರಿಗೆ ಸನ್ಮಾನ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನೆರವೇರಿತು. ಅಧ್ಯಕ್ಷೆ ಪಾರ್ವತಿ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಾಬುಸಾಬ್ ಬಡಿಗೇರ, ಜಿಪಂ ಅಧ್ಯಕ್ಷ ಶಂಕ್ರಪ್ಪ ಮಾತನವರ, ಎಪಿಎಂಸಿ ಸದಸ್ಯ ರವಿ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ಬಸವರಾಜ ಸಂಕಣ್ಣನವರ, ಉಮೇಶ್ ಸಂಕಣ್ಣನವರ, ಬಸವರಾಜ ಛತ್ರದ, ರಾಮಣ್ಣ ಉಕ್ಕುಂದ, ಹೊನ್ನೂರಪ್ಪ ಕಾಡಸಾಲಿ, ದುರ್ಗೇಶ್ ಗೋಣೆಮ್ಮನವರ, ರಾಜಾಭಕ್ಷ ಕೂರಗುಂದ, ರೇಣುಕಾ ಹಾವೇರಿ, ಅಬ್ದುಲ್ ನಬಿ ಕೂರಗುಂದ, ಇನ್ನಿತರರು ಉಪಸ್ಥಿತರಿದ್ದರು.