ರೋಣ: ಜನತೆಯ ಆರೋಗ್ಯ ರಕ್ಷಣೆಯಲ್ಲಿ ಶುದ್ಧ ಕುಡಿವ ನೀರು ಮಹತ್ವದ ಪಾತ್ರ ವಹಿಸುತ್ತದೆ. ಶುದ್ಧೀಕರಿಸಿದ ನೀರು ಪ್ಲೋರೈಡ್ ಮುಕ್ತವಾಗಿರುತ್ತದೆ. ಜನತೆಗೆ # 2 ರಲ್ಲಿ 20 ಲೀಟರ್ ನೀರು ಒದಗಿಸಬೇಕೆಂಬುದು ಸರ್ಕಾರದ ಯೋಜನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಅವರು ಸೋಮವಾರ ತಾಲೂಕಿನ ಮುದೇನಗುಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕುಡಿವ ನೀರಿನ ಸಮಸ್ಯೆ ಇರುವುದನ್ನು ಗಮನಿಸಿ ಈ ಘಟಕವನ್ನು ಪ್ರಾರಂಭಿಸಲಾಗಿದ್ದು, ಹಾಗೂ ಕುಡಿವ ನೀರಿಗಾಗಿ ಜಿಪಂ ನಿರ್ಮಿಸಿದ ಗ್ರಾಮದ ಹತ್ತಿರವಿರುವ ಬೃಹತ್ ಕೆರೆಗೆ ತಾಂತ್ರಿಕ ತೊಂದರೆಯಿಂದ ನೀರು ಬರದೇ ವಿಳಂಬವಾಗಿದ್ದು, ಮಲಪ್ರಭಾ ಕಾಲುವೆಯಿಂದ ಅತಿ ಶಿಘ್ರದಲ್ಲಿ ನೀರು ಪೂರೈಕೆ ಮಾಡಲಾಗುವುದು. ಅದಕ್ಕಾಗಿ ಈಗಾಗಲೇ ಸಂಬಂಧಪಟ್ಟ ಎಂಜನೀಯರ್ ಮತ್ತು ಮುಖ್ಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ವಿಳಂಬ ಮಾಡದೇ ಕೆರೆಗೆ ನೀರು ಪೂರೈಸುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಸಿದ್ಧಪ್ಪ ಬೆಳ್ಳಕ್ಕಿ ಆಯ್ಕೆ
ಹಾವೇರಿ: ಜಿಲ್ಲಾ ಕಾಂಗ್ರೆಸ್ ಘಟಕಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಕಬ್ಬೂರಿನ ಗ್ರಾಪಂ ಸದಸ್ಯ ಸಿದ್ಧಪ್ಪ ಬೆಳ್ಳಕ್ಕಿಯವರನ್ನು ಖಾಯಂ ಆಹ್ವಾನಿತರೆಂದು ನೇಮಕ ಮಾಡಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮನೋಹರ ತಹಸೀಲ್ದಾರ ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಸಲಹೆ ಸೂಚನೆ ನೀಡಿ ಪಕ್ಷ ಸಂಘಟನೆಗೆ ಮುಂದಾಗುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಬಸಮ್ಮ ನಿಧನ
ಹಾನಗಲ್ಲ: ತಾಲೂಕಿನ ಚಂದ್ರಗಿರಿ (ಬಿಂಗಾಪೂರ) ಗ್ರಾಮದ ಶತಾಯುಷಿ ಬಸಮ್ಮ ವೀರಪ್ಪ ಸವಣೂರ (105) ರವಿವಾರ ನಿಧನರಾದರು. ಇವರ ಅಂತ್ಯಕ್ರಿಯೆ ಸೋಮವಾರ ಸಂಜೆ ಗ್ರಾಮದಲ್ಲಿ ನೆರವೇರಿತು. ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂಧುಗಳಿದ್ದಾರೆ.
ಜೋಡಪ್ಪ ಪೇಟಕರ ನಿಧನ
ಸವಣೂರು: ತಾಲೂಕಿನ ತವರಮೆಳ್ಳಿಹಳ್ಳಿ ಪ್ರಗತಿಪರ ರೈತ ಜೋಡಪ್ಪ ಬಸವಣ್ಣೆಪ್ಪ ಪೇಟಕರ (77) ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಸಹೋದರರು ಹಾಗೂ ಓರ್ವ ಪುತ್ರ ಇದ್ದಾರೆ. ಮಾಜಿ ಸಚಿವ ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಡಿ.ಎಸ್. ಮಾಳಗಿ, ರುದ್ರಗೌಡ ಪಾಟೀಲ, ಬಿ.ಎಲ್. ಪೂಜಾರ, ರುದ್ರಪ್ಪ ಹಲಸೂರ, ಶಿವನಗೌಡ ಪಾಟೀಲ, ಬಂಕಣ್ಣ ಕುರಗೋಡಿ, ಮೆಹಬೂಬಲಿ ಸಂತಾಪ ಸೂಚಿಸಿದ್ದಾರೆ.