ಬ್ಯಾಡಗಿ: ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ನಡೆಸಿದ 4 ಹುಚ್ಚು ನಾಯಿಗಳು ಮೂವರು ಮಹಿಳೆಯರು, ಚುನಾವಣಾ ಸಿಬ್ಬಂದಿ ಸೇರಿದಂತೆ 11 ಜನರನ್ನು ಗಾಯಗೊಳಿಸಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಪಟ್ಟಣದ ಗಾಂಧಿನಗರ, ಶಿವಪುರ ಬಡಾವಣೆ, ಇಸ್ಲಾಂಪುರ ಗಲ್ಲಿಗಳಲ್ಲಿ ಸಂಚರಿಸುತ್ತಿದ್ದ ಜನರನ್ನು ನಾಯಿಗಳು ಏಕಾಏಕಿ ಕಚ್ಚಲು ಪ್ರಾರಂಭಿಸಿವೆ. ವಿಚಲಿತರಾದ ಜನ ಮನೆಯೊಳಗೆ ಓಡಿ ತಪ್ಪಿಸಿಕೊಂಡರೆ, ಉಳಿದವರು ವಾಹನಗಳನ್ನೇರಿ, ಪಾರಾಗಲು ಯತ್ನಿಸಿದರು.
ಈ ಪೈಕಿ ಒಂದು ನಾಯಿಯನ್ನು ಶಿವಪುರ ಬಡಾವಣೆ ಬಸವನಕಟ್ಟೆ ಧೋಬಿಘಾಟ್ ಬಳಿ ಕಲ್ಲು ಮತ್ತು ದೊಣ್ಣೆಗಳಿಂದ ಸಾರ್ವಜನಿಕರು ಹೊಡೆದು ಸಾಯಿಸಿದ್ದಾರೆ. ನಾಯಿ ಕಡಿತದಿಂದ ರತ್ನಾ ಮಲ್ಲಪ್ಪ ಹೆಸರೂರು, ಸಿದ್ಧೇಶ್ವರ ದಾನಪ್ಪನವರ, ಇಸ್ಮಾಯಿಲ್ ಮಾಸಣಗಿ, ವೀಣಾ ತಿರುಪತಿ ಭಜಂತ್ರಿ, ರಾಮಪ್ಪ ಗಂಗಪ್ಪ ಮಡಿವಾಳರ, ದೇವೇಂದ್ರಪ್ಪ ನಿಂಗಪ್ಪ ಗೌಡ್ರ, ಚೌಡಪ್ಪ ಹಾಲಪ್ಪ ಮಡಿವಾಳರ ಗಾಯಗೊಂಡಿದ್ದು, ಸ್ಥಳೀಯ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಸಿದ್ಧೇಶ್ವರ ದಾನಪ್ಪನವರ ಎಂಬುವರ ಬಲಗಾಲಿನ ಮೀನಖಂಡ ಕಿತ್ತುಹೋಗಿದೆ.
ಸಿಬ್ಬಂದಿ ಮೇಲೆ ದಾಳಿ: ಗುರುವಾರ ರಾತ್ರಿಯೇ ಹುಚ್ಚು ನಾಯಿಗಳ ಕಾಟ ಆರಂಭವಾಗಿದೆ. ಚುನಾವಣೆ ಕರ್ತವ್ಯ ಪೂರ್ಣಗೊಳಿಸಿ ತಡರಾತ್ರಿ ಮನೆಗೆ ಮರಳುತ್ತಿದ್ದ ಶಿಕ್ಷಕ ಬಿ.ಎನ್. ಹೊಸಗೌಡ್ರ ಎಂಬುವರನ್ನೂ ಕಚ್ಚಿವೆ.
ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಸಾರ್ವಜನಿಕರು ಸ್ಥಳೀಯ ಪುರಸಭೆಗೆ ಆಗ್ರಹಿಸಿದ್ದರೂ ಸ್ಪಂದಿಸಿರಲಿಲ್ಲ. ಆ ಘಟನೆಯ ಬಳಿಕ ಜನತೆ ಪುರಸಭೆ ಮುಂದೆ ಧರಣಿ ನಡೆಸಲು ನಿರ್ಧರಿಸಿದರು. ಆದರೆ, ರಜೆ ದಿನವಾಗಿದ್ದರಿಂದ ಯಾವೊಬ್ಬ ಅಧಿಕಾರಿಯೂ ಕೈಗೆ ಸಿಗಲಿಲ್ಲ.
ಇಸ್ಮಾಯಿಲ್ ಮಾಸಣಗಿ ಮಾತನಾಡಿ, ಶಿವಪುರ ಬಡಾವಣೆ ಧೋಬಿಘಾಟ್ ಬಳಿ ಜನರನ್ನು ಬೆನ್ನಟ್ಟಿ ನಾಯಿ ಕಚ್ಚುತ್ತಿದೆ. ಮಕ್ಕಳು, ಬೈಕ್ ಸವಾರರು ಗಾಯಗೊಂಡಿದ್ದಾರೆ. ಮೌಖಿಕ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದೂರಿದರು.