ಬ್ಯಾಡಗಿ: ಗುಡುಗು ಮಿಂಚು ಸಹಿತ ಅಬ್ಬರದೊಂದಿಗೆ ಬ್ಯಾಡಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಸಂಜೆ ಸುಮಾರು 45 ನಿಮಿಷಗಳ ಕಾಲ ಎಡೆಬಿಡದೆ ಮಳೆ ಸುರಿಯಿತು.
ಸಂಜೆ 5 ಗಂಟೆಯವರೆಗೂ ಬಿರುಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆ ಮೋಡ ಕವಿದ ವಾತಾವರಣ ಆವರಿಸಿ, 6 ಗಂಟೆ ಬಳಿಕ ಜೋರಾಗಿ ಮಳೆ ಸುರಿಯಲಾರಂಭಿಸಿತು. ಗುಡುಗಿನ ಅಬ್ಬರಕ್ಕೆ ಜನರು ಬಾಗಿಲು ಮುಚ್ಚಿಕೊಂಡು ಕುಳಿತಿದ್ದರು. ಒಂದೆರಡು ಬಾರಿ ಸಿಡಿಲಿನ ಅಬ್ಬರದ ಬೃಹತ್ ಸಪ್ಪಳ ಕೇಳಿ ಬಂದಿತ್ತಾದರೂ ಯಾವುದೇ ಸಾವುನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಮಳೆ ನೀರಿನಿಂದ ಮುಖ್ಯರಸ್ತೆಯಲ್ಲಿ ಚರಂಡಿ ತುಂಬಿಕೊಂಡು ರಸ್ತೆ ಮೇಲೆಲ್ಲಾ ಹರಿದಾಡಿತು. ಇದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಮಳೆ ಆರಂಭವಾಗುತ್ತಿದ್ದಂತೆ ವಿದ್ಯುತ್ ಪೂರೈಕೆ ನಿಲುಗಡೆಗೊಳಿಸಿದ ಹೆಸ್ಕಾಂ ರಾತ್ರಿ 8 ಗಂಟೆಯಾದರೂ ವಿದ್ಯುತ್ ಪೂರೈಕೆ ಮಾಡಲಿಲ್ಲ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೂರನೇ ಬಾರಿ ಮಳೆಯಾಗುತ್ತಿದ್ದು, ಬಹುತೇಕ ರೈತರು ಹರ್ಷಗೊಂಡಿದ್ದಾರೆ.