ಕ.ಪ್ರ.ವಾರ್ತೆ, ಹಾವೇರಿ, ಏ. 20
ಜಿಲ್ಲೆಯ ಕ್ರೀಡಾಪಟುಗಳಿಗೆ ವರವಾಗಬೇಕಿದ್ದ ಇಲ್ಲಿಯ ಜಿಲ್ಲಾ ಕ್ರೀಡಾ ಸಂಕೀರ್ಣ ಶಾಪವಾಗಿ ಪರಿಣಮಿಸಿದೆ. ಜೋರಾಗಿ ಬೀಸಿದ ಒಂದೇ ಗಾಳಿಗೆ ಒಳಾಂಗಣ ಕ್ರೀಡಾಂಗಣದ ಬೃಹತ್ ಗೋಡೆ ಕುಸಿತ ಕಂಡಿದ್ದು, ಇನ್ನು ಮುಂದೆ ಕ್ರೀಡಾ ಅಭ್ಯಾಸಕ್ಕಿಂತ ಜೀವ ಉಳಿಸಿಕೊಳ್ಳುವ ಕಡೆಗೇ ಆಟಗಾರರು ಗಮನ ನೀಡಬೇಕಿದೆ.
ಹೌದು, ಕೇವಲ 4 ವರ್ಷಗಳ ಹಿಂದೆ ಸುಮಾರು ರು. 1.25 ಕೋಟಿ ವೆಚ್ಚದಲ್ಲಿ ಇಲ್ಲಿಯ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ನಿರ್ಮಾಣವಾಗಿದ್ದ ಒಳ ಕ್ರೀಡಾಂಗಣ ಕಳೆದ ಏ. 15ರಂದು ಮಳೆ ಗಾಳಿ ಹೊಡೆತಕ್ಕೆ ಕುಸಿದಿದೆ. ಚಾವಣಿ ಹಾರಿಹೋಗಿದ್ದು, ಅದನ್ನು ದುರಸ್ತಿ ಮಾಡಿ ಉಪಯೋಗಿಸುವ ಮಟ್ಟವನ್ನೂ ಮೀರಿದೆ. ಗಾಳಿಯ ರಭಸಕ್ಕೆ ಗೋಡೆ ಒಳಭಾಗಕ್ಕೆ ವಾಲಿದ್ದು, ಸಂಪೂರ್ಣ ಗೋಡೆಯೇ ಕುಸಿಯುವ ಭೀತಿ ಎದುರಾಗಿದೆ. ಗಾಳಿ ಬೀಸುವ ಸಂದರ್ಭದಲ್ಲಿ ಅನೇಕರು ಷಟಲ್ ಆಡುತ್ತಿದ್ದರು. ಆದರೆ, ಅದಕ್ಕೂ ಕೆಲ ನಿಮಿಷಗಳ ಮುನ್ನ ವಿದ್ಯುತ್ ಕೈಕೊಟ್ಟಿದ್ದರಿಂದ ಅವರು ಹೊರಬಂದಿದ್ದರು. ಸುದೈವದಿಂದ ಯಾವುದೇ ಪ್ರಾಣಾಪಾಯ ಆಗದಿರುವುದೇ ನೆಮ್ಮದಿಯ ವಿಚಾರ.
ಕರ್ಮಕಾಂಡ: ಇಲ್ಲಿಯ ಜಿಲ್ಲಾ ಕ್ರೀಡಾಂಗಣ ಕಾಮಗಾರಿಯಲ್ಲಿ ದೊಡ್ಡ ಕರ್ಮಕಾಂಡವೇ ನಡೆದಿರುವ ಆರೋಪವಿದೆ. ರು. 1.25 ಕೋಟಿ ವೆಚ್ಚ ಮಾಡಿದ್ದರೂ ಸುರಕ್ಷತಾ ಮಾನದಂಡ ಅನುಸರಿಸದಿರುವುದು ಈಗ ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ಸುಮಾರು 100 ಅಡಿ ಎತ್ತರದ ಗೋಡೆ ಮೇಲೆಯೇ ಚಾವಣಿ ಹಾಕಲಾಗಿದೆ. ಭದ್ರ ಬುನಾದಿ, ಪಿಲ್ಲರ್ ಇಲ್ಲದೇ ಗೋಡೆಯನ್ನು ಅಷ್ಟು ಎತ್ತರಕ್ಕೆ ಏರಿಸಲಾಗಿದೆ. ಆದ್ದರಿಂದ ಈ ಹಿಂದಿನಿಂದಲೂ ಗೋಡೆ ಕುಸಿಯಬಹುದು ಎಂದು ಮಾಧ್ಯಮಗಳು ಹಾಗೂ ಕ್ರೀಡಾಪಟುಗಳು ಮುಂದಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ, ಸಂಬಂಧಪಟ್ಟ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದ್ದೇ ಅನಾಹುತಕ್ಕೆ ಕಾರಣವಾಗಿದೆ. ಕಾಮಗಾರಿಯ ಸಂಪೂರ್ಣ ಮಾಹಿತಿ ಕಲೆಹಾಕಿದರೆ ದೊಡ್ಡ ಕರ್ಮಕಾಂಡವೇ ಬಯಲಿಗೆ ಬರಲಿದೆ ಎಂದು ಕ್ರೀಡಾಸಕ್ತರು ಹೇಳುತ್ತಿದ್ದಾರೆ.
ಉಪಯೋಗಕ್ಕಿಲ್ಲದ ಸ್ವಿಮಿಂಗ್ ಫೂಲ್:
ಕ್ರೀಡಾ ಸಂಕೀರ್ಣದಲ್ಲಿ ಯಾವುದೂ ಗುಣಮಟ್ಟದಲ್ಲಿಲ್ಲ. ಸುಮಾರು ರು. 2 ಕೋಟಿ ವೆಚ್ಚದಲ್ಲಿ ಈಜುಗೊಳ ನಿರ್ಮಿಸಲಾಗಿದ್ದು, ಉಪಯೋಗಕ್ಕೆ ಬಾರದಂತಾಗಿದೆ. ನೀರಿನ ಸೋರಿಕೆ ಪ್ರಮಾಣ ಶೇ. 25ಕ್ಕೂ ಹೆಚ್ಚಿರುವುದರಿಂದ ಎರಡು ದಿನಗಳಲ್ಲಿ ಅರ್ಧ ಕೊಳ ನೀರು ಖಾಲಿಯಾಗುತ್ತಿದೆ. ನಿರ್ವಹಣೆಯೂ ಸರಿಯಿಲ್ಲದ್ದರಿಂದ ನೀರು ಹಾವಸೆಗಟ್ಟಿದೆ. ಸಾರ್ವಜನಿಕರು ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಗಲೀಜು ನೀರಿನಲ್ಲೇ ಈಜುವಂತಾಗಿದೆ. ರಾಜ್ಯ ಸರ್ಕಾರದಿಂದ ಈಜುಗೊಳಕ್ಕೆ ದೃಢೀಕರಣವೂ ಸಿಗದ್ದರಿಂದ ಅನಾಹುತ ಸಂಭವಿಸಿದರೂ ಅದಕ್ಕೆ ಸರ್ಕಾರ ಜವಾಬ್ದಾರಿ ವಹಿಸುವಂತಿಲ್ಲ.
ಯಾವುದೂ ಸರಿಯಿಲ್ಲ: ಅಥ್ಲೆಟಿಕ್ ಟ್ರ್ಯಾಕ್ ಸಂಪೂರ್ಣ ಹಾಳಾಗಿದೆ. ಪಕ್ಕದಲ್ಲೇ ಕ್ರೀಡಾ ವಸತಿ ಶಾಲೆಯಿದ್ದು, ಅಲ್ಲಿಯ ಮಕ್ಕಳಿಗೂ ಸರಿಯಾಗಿ ತರಬೇತಿ ಲಭ್ಯವಾಗುತ್ತಿಲ್ಲ. ಸ್ಕೇಟಿಂಗ್ ಅಂಕಣದ ನೆಲಹಾಸು ಕಿತ್ತಿದ್ದು, ಅಲ್ಲಿ ಅಭ್ಯಾಸ ಮಾಡಿರೆ ಬಿದ್ದು ಪೆಟ್ಟು ಮಾಡಿಕೊಳ್ಳುವುದು ನಿಶ್ಚಿತ. ಆದ್ದರಿಂದ ಸ್ಕೇಟಿಂಗ್ ಗ್ರೌಂಡ್ನಲ್ಲಿ ಕೆಲ ಮಕ್ಕಳು ಕ್ರಿಕೆಟ್ ಆಡುತ್ತಾರೆ. ಬಾಸ್ಕೆಟ್ ಬಾಲ್ ಅಂಕಣವಿದ್ದರೂ ಅದರ ಬಳಕೆಯಾಗುತ್ತಿಲ್ಲ. ವಾರ್ಷಿಕವಾಗಿ ಕ್ರೀಡಾಂಗಣ ನಿರ್ವಹಣೆಗೆ ಬರುವ ಅನುದಾನ ಎಲ್ಲಿ ಸೋರಿ ಹೋಗುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ನೀಡದಿದ್ದರೆ ಕ್ರೀಡಾಪಟುಗಳ ಪ್ರತಿಭೆ ಕಮರಿ ಹೋಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ನಾರಾಯಣ ಹೆಗಡೆ