ಜಿಂಕೆ, ನವಿಲು ಬೇಟೆ: ಇಬ್ಬರ ಬಂಧನ

Updated on: 

ಹಿರೆಕೇರೂರು: ಜಿಂಕೆ ಹಾಗೂ ನವಿಲನ್ನು ಕೊಂದು ಜೀಪ್‌ನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಲಬಿಕೊಂಡ ಗ್ರಾಮದಲ್ಲಿ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.
ಬೆಂಗಳೂರಿನ ಎಂಬಿಎ ವಿದ್ಯಾರ್ಥಿ ಜಕಾವುಲ್ಲಾ ಶರೀಫ್ ಹಾಗೂ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ವಾಹನ ಚಾಲಕ ಅಬೀದ್ ಸಲೀಂ ಬಂಧಿತ ಆರೋಪಿಗಳು. ಇವರೊಂದಿಗಿದ್ದ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಈ ಪೈಕಿ ಒಬ್ಬ ಶಿರಾಳಕೊಪ್ಪದ ಮುಸ್ತಿಕ್ ಎನ್ನಲಾಗಿದ್ದು, ಇನ್ನಿಬ್ಬರ ಹೆಸರು ಗೊತ್ತಾಗಿಲ್ಲ.
ಎಸ್ಪಿ ಎನ್. ಶಶಿಕುಮಾರ ಹಾಗೂ ಎಎಸ್ಪಿ ಡಿ.ಎಸ್ ಜಗಮಯ್ಯ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಪಟ್ಟಣದ ಪಿಎಸ್‌ಐ ಎಂ.ಎಂ. ಮಹಾಂತೇಶ, ಪಿಸಿಗಳಾದ ಆರ್.ವೈ. ಅಂಬಿಗೇರ, ಪೀರೂ ಎಸ್. ಲಮಾಣಿ, ಎಸ್.ಎಚ್. ನಿಡನೇಗಿಲ, ಪರಶುರಾಮ ಲಮಾಣಿ, ಎಸ್.ಟಿ ಬಣಕಾರ, ವೈ.ಎಫ್. ಸುಣಗಾರ, ಎಚ್.ಎನ್. ದನವಿನಮನಿ ಅವರಿದ್ದ ತಂಡ ವಿದ್ಯಾನಗರ ಗಣೇಶ ದೇವಸ್ಥಾನದ ಬಳಿ ದಾಳಿ ಮಾಡಿ ವಾಹನ ಹಾಗೂ ಮೃತಪಟ್ಟ ಜಿಂಕೆ, ನವಿಲು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಬಂಧಿತ ಜಕಾವುಲ್ಲಾ ಶರೀಫ್ ಶಾರ್ಪ್ ಶೂಟರ್ ಆಗಿದ್ದು, ಹೌಸಿಂಗ್ ಬೋರ್ಡ್ ಸೆಕ್ರೆಟರಿ ಮುಂತಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, 1997ರಲ್ಲಿ, 2008ರಲ್ಲಿ ಮೃತಪಟ್ಟಿರುವ ಐಎಎಸ್ ಅಧಿಕಾರಿ ಎಚ್.ಆರ್.ಎಲ್. ಶರೀಫ್ ಜನೇದ್ ಇವರ ಪುತ್ರ. ಎಂಬಿಎ ವಿದ್ಯಾರ್ಥಿಯಾಗಿರುವ ಜಕಾವುಲ್ಲಾ ನಿತ್ಯ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com