ಬ್ಯಾಡಗಿ: ನಿಧಿ ಆಸೆಗಾಗಿ ದುಷ್ಕರ್ಮಿಗಳು ದೇವಸ್ಥಾನವೊಂದರ ಮೊಗಸಾಲೆಯ ಕಂಬಗಳನ್ನು ಕಿತ್ತು ಹಾಕಿದ ಘಟನೆ ತಾಲೂಕಿನ ಶಿಡೇನೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದಿದೆ.
ಹಂಸಭಾವಿ-ಬ್ಯಾಡಗಿ ರಸ್ತೆಯಿಂದ ಕೂಗಳತೆ ದೂರದಲ್ಲಿರುವ ಈ ದೇವಸ್ಥಾನ 400 ವರ್ಷಗಳಷ್ಟು ಹಳೆಯದು. ಇಲ್ಲಿ ನಿಧಿ ಇರಬಹುದೆಂದು ಶಂಕಿಸಿ ದೇವಸ್ಥಾನದ ಮೊಗಸಾಲೆಯ ಬೃಹತ್ ಕಲ್ಲುಗಳನ್ನು ಕೀಳಲಾಗಿದೆ. ಭಾನುವಾರ ತಡರಾತ್ರಿ ಘಟನೆ ನಡೆದಿರಬಹುದೆಂದು ಶಂಕಿಸಿರುವ ಪೊಲೀಸರು, ದುಷ್ಕರ್ಮಿಗಳಿಗಾಗಿ ವ್ಯಾಪಕ ಬಲೆ ಬೀಸಿದ್ದಾರೆ. ನಿತ್ಯದ ಪೂಜೆಗಾಗಿ ನೀಲಮ್ಮ ಪೂಜಾರ ದೇವಸ್ಥಾನಕ್ಕೆ ತೆರಳಿದಾಗ ಮೊಗಸಾಲೆ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಕಂಡು ದೇವಸ್ಥಾನ ಸಮಿತಿ ಸದಸ್ಯರಿಗೆ ಹಾಗೂ ಗ್ರಾಮದ ಮುಖಂಡರಿಗೆ ವಿಷಯ ತಿಳಿಸಿದ್ದಾರೆ.
ಬೃಹತ್ ಕಲ್ಲು ಪುಡಿಪುಡಿ: ಪಕ್ಕದಲ್ಲೇ ಸ್ಮಶಾನ ಇರುವುದರಿಂದ ಈ ದೇವಸ್ಥಾನಕ್ಕೆ ಜನ ಬರುವುದು ಕಡಿಮೆ. ಆದರೆ, ಮೊಗಸಾಲೆಯ ಬೃಹತ್ ಕಲ್ಲಿನ ಕಂಬ ಕೀಳುವುದು ಸುಲಭವಲ್ಲ. ಕನಿಷ್ಠ 15 ಜನರಿರುವ ತಂಡ ಸೇರಿ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಎರಡನೇ ಬಾರಿ ಘಟನೆ: ಈ ಕುರಿತು ಮಾತನಾಡಿದ ದೇವಸ್ಥಾನ ಸಮಿತಿ ಅಧ್ಯಕ್ಷ ಪರಮೇಶಗೌಡ ಹಾಗೂ ರಮೇಶ ಸುತ್ತಕೋಟಿ, ಕೆಲ ವರ್ಷಗಳ ಹಿಂದೆ ಇಂತಹ ವಿಫಲ ಪ್ರಯತ್ನ ಈ ದೇವಸ್ಥಾನದಲ್ಲಿ ನಡೆದಿತ್ತು. ಅಂದು ವೀರಭದ್ರೇಶ್ವರ ಮೂರ್ತಿ ಕಿತ್ತು ಅದರ ಕೆಳಭಾಗದಲ್ಲಿ ನಿಧಿಗಾಗಿ ಗುಂಡಿ ತೆಗೆದಿದ್ದರೆಂದು ತಿಳಿಸಿದರು.
ನೂಕು ನುಗ್ಗಲು: ಸುದ್ದಿ ತಿಳಿದ ಶಿಡೇನೂರ ಹಾಗೂ ಸುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ದೇವಸ್ಥಾನದ ಬಳಿ ಜಮಾಯಿಸಿ, ಒಳನುಗ್ಗಿ ವೀಕ್ಷಿಸುವ ಪ್ರಯತ್ನಕ್ಕೆ ಮುಂದಾದರು. ಪೊಲೀಸರು ಒಳಭಾಗದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ.
ತಹಸೀಲ್ದಾರ್ ಭೇಟಿ: ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶಿವಶಂಕರ ನಾಯಕ್, ಸಿಪಿಐ ಹಾಲಮೂರ್ತಿರಾವ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆ ಕುರಿತು ವಿವರಿಸಿದ ತಹಸೀಲ್ದಾರ್ ಶಿವಶಂಕರ ನಾಯಕ್, ಇಂತಹ ಕೃತ್ಯಗಳಿಂದ ಸಾರ್ವಜನಿಕರು ಸಹಜವಾಗಿ ಭಯಭೀತಗೊಳ್ಳುತ್ತಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಿದ್ದೇವೆ. ಸಾರ್ವಜನಿಕ ಆಸ್ತಿ ದೋಚುವ ಪ್ರಯತ್ನಕ್ಕೆ ಮುಂದಾಗುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ದೇವಾಲಯಗಳ ಮೇಲೆ ನಿಗಾ: ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಪಿಐ ಹಾಲಮೂರ್ತಿ ರಾವ್, ತಾಲೂಕಿನ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ವಿರಳವಾಗಿದ್ದು, ಯಾವುದೇ ದೇವಾಲಯಗಳಿಗೆ ರಕ್ಷಣೆ ನೀಡಿರಲಿಲ್ಲ. ಆದರೆ, ತಕ್ಷಣ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಪುರಾತನ ದೇವಾಲಯಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.