ಹಾವೇರಿ: ಪುರಾಣ, ಪ್ರವಚನ ಹಾಗೂ ಉಪನ್ಯಾಸಕ್ಕೆ ಮಾತ್ರ ವಚನ ಬಳಕೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಬದಲು ವಚನ ಸಂಸ್ಕೃತಿ ಮಹತ್ವವನ್ನು ಪ್ರಪಂಚಕ್ಕೆ ತಿಳಿಸುವ ಮೂಲಕ ವಚನ ಸಂಸ್ಕೃತಿ ಮೇಲೆ ಬೆಳಕು ಚೆಲ್ಲಬೇಕು ಎಂದು ರಾಮದುರ್ಗದ ಬಸವತತ್ವ ಅನುಯಾಯಿ ಸಿದ್ದಣ್ಣ ಲಂಗೋಟಿ ಹೇಳಿದರು.
ನಗರದ ದಾನೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶಿವಬಸಪ್ಪ ಮತ್ತು ಸೌಭಾಗ್ಯ ಮುದ್ದಿ ಹಾಗೂ ಮಲ್ಲಿಕಾರ್ಜುನ ಮತ್ತು ನೀಲಮ್ಮ ದಂಪತಿಯ 25ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ 28ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಾದಿ ಶಿವಶರಣರ ಪರಂಪರೆಯಲ್ಲಿ ಪಾವಿತ್ರ್ಯತೆ ಇದೆ. ಬದುಕಿನ ಸಮಸ್ಯೆ ಎದುರಿಸಲಾಗದೇ ಸಮಾಜವನ್ನು ತೊರೆದು ಕಾಡಿಗೆ ಹೋಗುವ ಸಂಸ್ಕೃತಿ ವಿರೋಧಿಸದೆ ಬಸವಾದಿ ಶಿವಶರಣರು, ಜಂಗಮನಾಗಿ ಸಮಾಜ ಸೇವೆ ಮಾಡುವವರಿಗೆ ಉನ್ನತ ಸ್ಥಾನ ನೀಡಿದ್ದಾರೆ. ಕೇವಲ ವ್ಯಕ್ತಿ ಕಲ್ಯಾಣ ಕುಟುಂಬ ಕಲ್ಯಾಣವಲ್ಲ. ಬದಲಿಗೆ ಸಮಾಜದ, ದೇಶದ ಕಲ್ಯಾಣ ಹಾಗೂ ವಿಶ್ವ ಕಲ್ಯಾಣಕ್ಕೆ ಆದ್ಯತೆ ನೀಡುವುದು ಮನುಷ್ಯನ ನಿಜವಾದ ಧರ್ಮ ಎಂದರು. ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಶ್ರೀಗಳು, ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಬಸವ ಬಳಗದ ಜಿಲ್ಲಾ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಮಾತನಾಡಿದರು. ಸಿಂದಗಿಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ, ಉದ್ಯಮಿ ಅಶೋಕ ಹಳವತ್ತಿ, ಮುರಿಗೆಪ್ಪ ಕಡೆಕೊಪ್ಪ, ಮಾಲತೇಶ ಅಂಗೂರ, ಬಸವ ಬಳಗದ ಸಲಹಾ ಸಮಿತಿ ಸದಸ್ಯ ಮೋಕ್ಷನಾಥ ಹರಪನಹಳ್ಳಿ ಹಾಗೂ ಶಿವಬಸಪ್ಪ ಮತ್ತು ಸೌಭಾಗ್ಯ ಮುದ್ದಿ, ಮಲ್ಲಿಕಾರ್ಜುನ ಮತ್ತು ನೀಲಮ್ಮ ದಂಪತಿಯನ್ನು ಸನ್ಮಾನಿಸಲಾಯಿತು. ಶಿವಬಸಪ್ಪ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿ, ವಂದಿಸಿದರು.