ಗುತ್ತಲ: ಶನಿವಾರ ಬೀಸಿದ ಬಿರುಗಾಳಿಗೆ ಹಾಲಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ತತ್ತರಿಸಿವೆ. ಇದರಿಂದ ಹಾಲಗಿ ಗ್ರಾಮದ 5ಕ್ಕೂ ಹೆಚ್ಚು ಮನೆಗಳು ಅನಾಹುತಕ್ಕೀಡಾಗಿದ್ದು, ವಿದ್ಯುತ್ ಟಿಸಿ ಸೇರಿದಂತೆ 3 ಕಂಬಗಳು ನೆಲಕ್ಕುರುಳಿವೆ.
ಶನಿವಾರ ಸಂಜೆ 5ಕ್ಕೆ ಅಲ್ಪ ಮಳೆ ಕಾಣಿಸಿಕೊಂಡಿತ್ತು. ನಂತರ ಸುನಾಮಿಯಂತೆ ಬೀಸಿದ ಬಿರುಗಾಳಿಗೆ ಹಾಲಗಿ ಗ್ರಾಮದ ನಾಲ್ಕು ನೂತನ ಮನೆಗಳ ಮೇಲ್ಚಾವಣಿ ಕಿತ್ತಿದ್ದು, ಮೇಲ್ಛಾವಣಿಗೆ ಹಾಕಿದ ತಗಡುಗಳು ತೂರಿಕೊಂಡು ಹೋಗಿವೆ. ಇದಲ್ಲದೆ, ಗ್ರಾಮದ ಮೂರು ವಿದ್ಯುತ್ ಕಂಬಗಳು ನೆಲಕ್ಕಪ್ಪಳಿಸಿವೆ. ಒಂದು ವಿದ್ಯುತ್ ಟ್ರಾನ್ಸ್ಫಾರ್ಮರ್ ಸಹಿತ ನೆಲಕ್ಕುರುಳಿದ್ದು, ಗ್ರಾಮದಲ್ಲಿ ಕತ್ತಲೆ ಆವರಿಸಿತ್ತು. ಹೀಗಾಗಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ.
ಬಿರುಗಾಳಿಯಿಂದ ಹಾನಿಗೊಳಗಾದ ಹಾಲಗಿ ಗ್ರಾಮಕ್ಕೆ ಶಾಸಕ ರುದ್ರಪ್ಪ ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿಯೇ ಗುತ್ತಲ ಕೆಇಬಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲಿಯೇ ವಿದ್ಯುತ್ ಕಂಬ ಸರಿಪಡಿಸಿ ಗ್ರಾಮಕ್ಕೆ ತ್ವರಿತಗತಿಯಲ್ಲಿ ವಿದ್ಯುತ್ ನೀಡುವಂತೆ ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಕರಿಯಪ್ಪ ಉಂಡಿ, ಎಸ್.ಎಫ್.ಎನ್. ಗಾಜಿಗೌಡ್ರ, ಎಂ.ಎಂ. ಹಿರೇಮಠ, ಸುಜಾತಪ್ಪ, ಶಿದ್ಲಿಂಗಯ್ಯ ಹೆಬ್ಬಾಳ ಹಿರೇಮಠ, ವಿ.ಎಸ್. ನಾಡರ, ಬಸನಗೌಡ ಕಾಕಡೆ, ಫಕ್ಕೀರಯ್ಯ ಕುಲಕರ್ಣಿ, ಪ್ರಕಾಶ ಡಿಸಲೆ ಮುಂತಾದವರು ಇದ್ದರು.