ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 1
ಜಪಾನಿನ ಹಿರೋಶಿಮಾದಲ್ಲಿ ಆ. 2ರಿಂದ 9ರ ವರೆಗೆ ಎ ಮತ್ತು ಎಚ್ (ಅಟೋಮಿಕ್-ಹೈಡ್ರೋಜನ್) ಬಾಂಬ್‌ಗಳ ವಿರುದ್ಧ ಅಂತಾರಾಷ್ಟ್ರೀಯ ವಿಶ್ವ ಸಮ್ಮೇಳನ-2014 ನಡೆಯಲಿದೆ ಎಂದು ದಾಸನೂರು ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶ್ ದಾಸನೂರು ತಿಳಿಸಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿರೋಶಿಮಾದ ಬುಂಕ ಕ್ರಿಯು ಕೈಕಾನ್ ಹಾಲ್‌ನಲ್ಲಿ ಸಮ್ಮೇಳನ ನಡೆಯಲಿದ್ದು, ಸಂಘಟನಾ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರ ನೀಡಿದರು.
ಜು. 2, 1914ರಿಂದ ನ. 11, 1918ರ ವರೆಗೆ ಮೊದಲ ವಿಶ್ವ ಮಹಾಯುದ್ಧ ನಡೆದಿತ್ತು. ಸೆ. 1, 1939ರಿಂದ ಸೆ. 2, 1945ರ ವರೆಗೆ ನಡೆದ ದ್ವಿತೀಯ ವಿಶ್ವ ಮಹಾಯುದ್ದದಲ್ಲಿ ಅಮೆರಿಕ ಹಿರೋಶಿಮಾ ಮತ್ತು ನಾಗಾಸಾಕಿ ಮೇಲೆ ನಡೆಸಿದ ಅಣುಶಸ್ತ್ರ ದಾಳಿಯಿಂದ ಉಂಟಾದ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು 1986ರಲ್ಲಿ ವಿಶ್ವಾದ್ಯಂತ ನಡೆದ ಅಣುಶಸ್ತ್ರ ಬಳಕೆ ವಿರೋಧಿ ಚಳವಳಿ ಸಂದರ್ಭ ಪೇಂಟಿಂಗ್ ರಚಿಸಲಾಗಿತ್ತು. ಸಮುದಾಯ ಸಂಘಟನೆ ನೇತೃತ್ವದಲ್ಲಿ 60 ದಿನಗಳ ಕಾಲ ನಡೆದ ಜಾಥಾದಲ್ಲಿ ಭಾರತದ ಎಲ್ಲ ವಿಶ್ವ ವಿದ್ಯಾನಿಲಯಗಳು ಸೇರಿದಂತೆ ಕರ್ನಾಟಕದ ನಾನಾ ಕಡೆ ಪ್ರದರ್ಶಿಸಲಾಗಿತ್ತು ಎಂದು ಪ್ರಕಾಶ್ ದಾಸನೂರ ವಿವರಿಸಿದರು.
ಇತ್ತೀಚೆಗೆ ಗೊಟಗೋಡಿಯ ಉತ್ಸವ ರಾಕ್ ಗಾರ್ಡ್‌ನ್‌ನಲ್ಲಿ ಸಮ್ಮೇಳನದಲ್ಲಿ ಪೇಂಟಿಂಗ್ ಪ್ರದರ್ಶಿಸುವುದಕ್ಕಾಗಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಸಮ್ಮೇಳನದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸುತ್ತಿರುವ ಸಾಮಾಜಿಕ ಚಿಂತನೆ ಲೇಖಕಿ ಯಮುನಾ ಗಾಂವ್ಕರ್ ಅವರು ವಿಡಿಯೋ ಸಿಡಿ ಪ್ರದರ್ಶಿಸಲಿದ್ದಾರೆ ಎಂದರು.
ಎಂಟು ದಿನ ನಡೆಯುವ ಸಮ್ಮೇಳನದಲ್ಲಿ ಅಣು ಶಸ್ತ್ರಗಳ ಮೇಲೆ ನಿಷೇಧ ಹೇರುವುದು, ಹಿರೋಶಿಮಾ-ನಾಗಾಸಾಕಿ ಮೇಲೆ ಅಣುಶಸ್ತ್ರ ದಾಳಿಯಿಂದ ಉಂಟಾದ ದುಷ್ಪರಿಣಾಮಗಳು, ಅಣು ಶಸ್ತ್ರಗಳಿಲ್ಲದ ವಿಶ್ವ ಇರಬೇಕು, ಸುರಕ್ಷಿತ ಜೀವನ ಹಾಗೂ ಉತ್ತಮ ಪರಿಸರ, ಉತ್ತಮ ಸಮಾಜ ನಿರ್ಮಾಣ, ಶಾಂತಿ ಸ್ಥಾಪನೆಗೆ ನಡೆದ ಚಳವಳಿಗಳ ಪಾತ್ರ ಹಾಗೂ ಅಣು ಶಸ್ತ್ರಗಳ ಮೇಲೆ ನಿಷೇಧ ಹೇರುವ ಕುರಿತ ಸಹಮತದ ಬಗ್ಗೆ ಅಣು ಶಸ್ತ್ರ ವಿರೋಧಿ ದೇಶಗಳ ತಜ್ಞರು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಶೇಷ ಗೋಷ್ಠಿಗಳು ಆ. 5ರಂದು ಅಣು ಶಸ್ತ್ರಗಳ ಮೇಲೆ ನಿಷೇಧ ಹೇರುವ ಬಗ್ಗೆ ಸರ್ಕಾರಗಳು ಹಾಗೂ ಅರೆ ಸರಕಾರಿ ಸಂಘಟನೆಗಳ (ಎನ್‌ಜಿಒ) ಮಧ್ಯೆ ಚರ್ಚೆ ನಡೆಯಲಿದೆ.
ಆ. 6ರಂದು ಪೀಸ್ ಪಾರ್ಕ್‌ನಲ್ಲಿ ಹಿರೋಶಿಮಾದಲ್ಲಿ ಶಾಂತಿ ಸ್ಥಾಪನೆಯ ಸಂಸ್ಮರಣೆ ಸಮಾರಂಭದಲ್ಲಿ ವಿಡಿಯೋ ಪ್ರದರ್ಶನ ನಡೆಯಲಿದೆ ಹಾಗೂ 7ರಂದು ಅಣು ಶಸ್ತ್ರಗಳಿಲ್ಲದ ವಿಶ್ವ ಎಂಬ ವಿಷಯದ ಮೇಲೆ ಅನ್ಯ ದೇಶಗಳಿಂದ ಬಂದ ಪ್ರತಿನಿಧಿಗಳು ವಿಷಯ ಮಂಡಿಸುವರು.
8ರಂದು ನಾಗಾಸಾಕಿ ವಿಶ್ವ ವಿದ್ಯಾನಿಲಯದ ನಕಾಬೆ ಆಡಿಟೋರಿಯಂನಲ್ಲಿ ಅಂತಾರಾಷ್ಟ್ರೀಯ ವೇದಿಕೆಯಿಂದ ಅಣು ಶಸ್ತ್ರ ಮುಕ್ತ ವಿಶ್ವದ ಬಗ್ಗೆ ವಿಶೇಷ ಕಾರ್ಯಕ್ರಮ ಹಾಗೂ 9ರಂದು ನಾಗಾಸಾಕಿ ಸಿಟಿಯ ಕೌಕೈಡೊ ಹಾಲ್‌ನಲ್ಲಿ ನಾಗಾಸಾಕಿ ಡೇ ರ್ಯಾಲಿ ನಡೆಯಲಿದ್ದು, ಅಣು ಶಸ್ತ್ರ ಮುಕ್ತ ವಿಶ್ವ ನಿರ್ಮಾಣಕ್ಕೆ ಸಹಿ ಸಂಗ್ರಹ ಚಳವಳಿ ನಡೆಯಲಿದೆ ಎಂದು ತಿಳಿಸಿದರು.
Advertisement