ಬ್ಯಾಡಗಿ: ಸಮಾಜ ಕಲ್ಯಾಣಾಧಿಕಾರಿ ಮಾಡಿದ ತಪ್ಪಿನಿಂದ ತಾಲೂಕಿನ ತುಮರಿಕೊಪ್ಪ ಗ್ರಾಮದ ಆಶ್ರಮ ಶಾಲೆಯಲ್ಲಿ ಬರುವ ಅ. 15ರಂದು ಧ್ವಜಾರೋಹಣ ಕಾರ್ಯಕ್ರಮ ನಡೆಯುವ ಅನುಮಾನ ವ್ಯಕ್ತವಾಗಿದೆ.
ಇತ್ತೀಚೆಗೆ ಕೋರ್ಟ್ ಆಶ್ರಮ ಶಾಲೆ ಎರಡೂ ಕಟ್ಟಡಗಳ ಮಧ್ಯದಲ್ಲಿ (ಕಟ್ಟಡಕ್ಕೆ ಹೊಂದಿಕೊಂಡು) ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗವಿರುವುದಾಗಿ ಆದೇಶ ನೀಡಿದೆ. ಹೀಗಾಗಿ ಶಾಲೆಯ ಮುಂಭಾಗ ನಿರ್ಮಿಸಲಾಗಿದ್ದ ಧ್ವಜಾರೋಹಣ ಕಟ್ಟೆ ಜಾಗ ಜಮೀನು ಮಾಲೀಕರ ಪಾಲಾಗಿದ್ದು, ಧ್ವಜಕಟ್ಟೆ ಬಳಸಿಕೊಂಡು ಜಮೀನು ಮಾಲೀಕ ಬೇಲಿ ನಿರ್ಮಿಸಿದ್ದರಿಂದ ಧ್ವಜಾರೋಹಣ ನಡೆಯಲು ಅನುಮಾನಕ್ಕೆ ಕಾರಣವಾಗಿದೆ.
ರು. 1.5 ಕೋಟಿಯಲ್ಲಿ ನಿರ್ಮಾಣ: ಹಿಂದುಳಿದ ವರ್ಗದ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ತುಮರಿಕೊಪ್ಪದ ನಾಲ್ಕೂವರೆ ಎಕರೆ ಗಾಂವಾಠಾಣ ಆಸ್ತಿಯಲ್ಲಿ ಸುಮಾರು ರು. 1.5 ಕೋಟಿ ವೆಚ್ಚದಲ್ಲಿ ಆಶ್ರಮಶಾಲೆ (ವಸತಿ ಶಾಲೆ) ನಿರ್ಮಿಸಿದೆ. ಇದಕ್ಕೆ ಹೊಂದಿಕೊಂಡಿರುವ ಅದೇ ಗ್ರಾಮದ ಮೌನೇಶಪ್ಪ ಕಮ್ಮಾರ ದಾನರೂಪದಲ್ಲಿ ತನ್ನ ಸ್ವಂತ ಖಾತೆ ಕಬ್ಜಾದಲ್ಲಿದ್ದ 16 ಗುಂಟೆ ಜಾಗ ದಾನವಾಗಿ ನೀಡಲು ಒಪ್ಪಿದ್ದರಲ್ಲದೆ, ಮಾಜಿ ಸಚಿವ ಸಿ.ಎಂ. ಉದಾಸಿ ಅವರಿಂದ ಸನ್ಮಾನ ಪಡೆದುಕೊಂಡಿದ್ದರು.
ದಾನಪತ್ರ ವಿಳಂಬ: ಶಾಲೆ, ಕಾಲೇಜು, ಇನ್ನಿತರ ಉದ್ದೇಶಗಳಿಗೆ ಖಾಸಗಿ ಜಮೀನು ಪಡೆಯಲು ಸರ್ಕಾರ ಮುಂದಾದಲ್ಲಿ ಅಂತಹ ಜಾಗವನ್ನು ರಾಜ್ಯಪಾಲರ ಹೆಸರಿಗೆ ಉಪನೋಂದಣಿ ಕಚೇರಿಯಲ್ಲಿ ದಾನಪತ್ರ ಮಾಡಿಸುವುದು ನಿಯಮ. ಆದರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಿರ್ಲಕ್ಷ್ಯದಿಂದ ಆಶ್ರಮ ಶಾಲೆ ಕಟ್ಟಡ ಮುಕ್ತಾಯಗೊಂಡರೂ ಸ್ಥಳದ ದಾನಪತ್ರ ಮಾತ್ರ ಮಾಡಿಸಿಕೊಂಡಿಲ್ಲ.
ಕೋರ್ಟ್ ಮೆಟ್ಟಿಲು: ಇಷ್ಟರ ನಡುವೆ ಮೌನೇಶಪ್ಪ ಕಮ್ಮಾರನ ಮಕ್ಕಳು ಆಸ್ತಿಗಾಗಿ ಸ್ವಂತ ತಂದೆ ಮತ್ತು ಸಮಾಜ ಕಲ್ಯಾಣ ಇಲಾಖೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಮೊಕದ್ದಮೆ ವಿಚಾರಣೆ ನಡೆಸಿದ ಕೋರ್ಟ್ ಎರಡೂ ಕಟ್ಟಡ ನಡುವೆ (ದಾನರೂಪವಾಗಿ ಕೊಡಬೇಕೆಂದಿದ್ದ) ಜಾಗೆಯು ಕಮ್ಮಾರ ಕುಟುಂಬಕ್ಕೆ ಸೇರಿದ್ದು ಅವರ ಮರ್ಜಿಗೆ ತಕ್ಕಂತೆ ಅನುಭವಿಸಬಹುದೆಂದು ಆದೇಶಿಸಿದೆ.
Advertisement