ಬ್ಯಾಡಗಿ: ರೈತರ ಅಭ್ಯುದಯಕ್ಕಾಗಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಯೋಜನೆ ಪ್ರಾರಂಭವಾಗಿ 8 ವರ್ಷ ಗತಿಸಿದರೂ ಕೃಷಿಭೂಮಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ನೆಪ ಹೇಳದೇ ತಿಂಗಳೊಳಗಾಗಿ ಪ್ರಾಯೋಗಿಕವಾಗಿ ನೀರು ಹರಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸೋಮವಾರ ತಾಲೂಕಿನ ರೈತರ ಮಹತ್ವಾಕಾಂಕ್ಷಿ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ವೀಕ್ಷಿಸಿ ಬಳಿಕ ಅವರು ಮಾತನಾಡಿದರು.
ರು. 115 ಕೋಟಿ ವೆಚ್ಚದಲ್ಲಿ ಯೋಜನೆಯಡಿ ಸುಮಾರು 22 ಗ್ರಾಮಗಳ 13 ಸಾವಿರ ಏಕರೆ ಕೃಷಿಭೂಮಿಗಳಿಗೆ ನೀರುಣಿಸುವ ಉದ್ದೇಶದಿಂದ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯನ್ನು 2006ರಲ್ಲಿ ಪ್ರಾರಂಭಿಸಲಾಗಿದೆ. ಹೀಗಿದ್ದರೂ ಇಂದಿಗೂ ರೈತರ ಭೂಮಿಗಳಿಗೆ ನೀರು ಹರಿಸದಿರುವುದು ವಿಪರ್ಯಾಸದ ಸಂಗತಿ ಎಂದರು.
ಅಧಿಕಾರಿಗಳ ಸಹಕಾರವಿರಲಿ: ಸರ್ಕಾರದ ಯಾವುದೇ ಯೋಜನೆಗಳು ಜನರಿಗೆ ತಲುಪಲು ಅಧಿಕಾರಿಗಳ ಸಹಕಾರ ಅವಶ್ಯ. ಹತ್ತು ಹಲವು ಏರಿಳಿತಗಳನ್ನು ಕಂಡಿರುವ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಿ ಯೋಜನೆಗೆ ವಿದ್ಯುತ್ ಸಂಪರ್ಕ ಮಾತ್ರ ಉಳಿದಿದೆ. ಹೀಗಿದ್ದರೂ ನೆಪಗಳನ್ನು ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ಕೆಲಸ ನಿಲ್ಲಸಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸುಳ್ಳು ಮಾಹಿತಿ: ಆಕ್ರೋಶಗೊಂಡ ರೈತರನ್ನು ಸಮಾಧಾನಪಡಿಸಿದ ಶಾಸಕರು, ಅಧಿಕಾರಿಗಳು ಯಾರನ್ನೋ ತೃಪ್ತಿಪಡಿಸಲು ಮಾಹಿತಿ ನೀಡುವುದು ಸರಿಯಾದ ಕ್ರಮವಲ್ಲ. ವಾಸ್ತವತೆ ಜನರಿಗೆ ತಿಳಿಸಬೇಕು. ಜೂನ್ನಲ್ಲೇ ನೀರು ಒದಗಿಸು ವುದಾಗಿ ಸಾರ್ವಜನಿಕವಾಗಿ ಹೇಳಿದ್ದನ್ನು ಅಧಿಕಾರಿಗಳೆದುರು ಬಿಚ್ಚಿಟ್ಟ ಶಾಸಕರು, ಅಧಿಕಾರಿಗಳು ಮಾಡಿದ ತಪ್ಪಿಗೆ ಜನಪ್ರತಿನಿಧಿಗಳು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಲುವೆಗಳ ಪರಿಶೀಲನೆ: ರೈತರ ಒತ್ತಡಕ್ಕೆ ಮಣಿದ ಶಾಸಕ ಶಿವಣ್ಣನವರ ಅಧಿಕಾರಿಗಳೊಂದಿಗೆ ತಾಲೂಕಿನ ಚಿಕ್ಕಬಾಸೂರು, ಚಿಕ್ಕಳ್ಳಿ, ಕೆಲವರಕೊಪ್ಪ, ಕೆರೆಕ್ಯಾತನಳ್ಳಿ, ಬ್ಯಾತನಾಳ ಇನ್ನಿತರೆಡೆ ಕಾಲುವೆಗಳ ಸಮೀಕ್ಷೆ ನಡೆಸಿದರು. ಈ ಸಂದರ್ಭ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಿಂದಾಗಿರುವ ನಷ್ಟದ ಕುರಿತು ಕೆಲ ರೈತರು ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಚ್.ಎಚ್. ದೊಡ್ಮನಿ, ಎಸ್.ಸಿ. ಶಿಡೇನೂರ, ಶಂಕರಗೌಡ ಪಾಟೀಲ, ರುದ್ರಣ್ಣ ಹೊಂಕಣ, ಸುರೇಶಗೌಡ ಪಾಟೀಲ, ಹುಚ್ಚನಗೌಡ ಲಿಂಗನಗೌಡ್ರ, ವಿರೇಶ ಮತ್ತೀಹಳ್ಳಿ, ಕಾರ್ಯನಿರ್ವಾಹಕ ಅಭಿಯಂತ ಚನ್ನಬಸಪ್ಪ, ಶ್ರೀನಿವಾಸ ಮಲ್ಲಿಗವಾಡ, ಶಿವಮೂರ್ತಿ, ಎಂ. ಮಂಜುನಾಥ ಇತರರಿದ್ದರು.
ರೈತರ ಆಕ್ರೋಶ
8 ದಿನಗಳಲ್ಲಿ ತಾಲೂಕಿನ ಚಿಕ್ಕಳ್ಳಿವರೆಗೆ ನೀರು ಹರಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಂತೆ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೈತ ಹನುಮಗೌಡ ಪಾಟೀಲ ಮಾತನಾಡಿ, 8 ತಿಂಗಳು ಬಿಟ್ಟು ನೀರು ಕೊಟ್ಟರೆ ನಮ್ಮ ಪುಣ್ಯ. ನೀರು ಹರಿಸುವ ಮುಖ್ಯ, ಕಿರುಗಾಲುವೆಗಳನ್ನು ಒಮ್ಮೆ ನೋಡಿರುವುವಿರಾ? ಬಹುತೇಕ ಕಾಲುವೆಗಳಲ್ಲಿ ಮಣ್ಣು ತುಂಬಿ ನಾದುರಸ್ತಾಗಿವೆ. ಇನ್ನೆಲ್ಲಿಂದ ನೀರು ಕೊಡಲು ಸಾಧ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೇ. 100ರಷ್ಟು ಶ್ರಮಿಸಿ
ಗುಡ್ಡದ ಮಲ್ಲಾಪುರ ಏತ ನೀರಾವರಿಯ ಎರಡನೇ ಹಂತದ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಾಮಗಾರಿ ಕುರಿತು ಉಳಿದ 4 ಪ್ರಕರಣಗಳಲ್ಲಿ 18 ರೈತರಿಗೆ ಪರಿಹಾರ ಹಣ ತಲುಪಬೇಕಾಗಿದೆ. ರೈತರಿಗೆ 4 (1)ಏ ಹಾಗೂ 6 (1) ಏ ನೋಟಿಸ್ ಜಾರಿಯಾಗಿವೆ. ಹೀಗಿದ್ದರೂ ಸರ್ಕಾರದ ಮಟ್ಟದಲ್ಲಿ ಹಣ ಬಿಡುಗಡೆ ಮಾಡಿಸಲು ವಿಳಂಬವೇಕೆ? ಶೇ. 100ರಷ್ಟು ಶ್ರಮಿಸಿದರೆ ಕಾರ್ಯ ಯಶಸ್ವಿಯಾಗುತ್ತದೆ ಎಂದರು.