ಕನ್ನಡಪ್ರಭ ವಾರ್ತೆ, ಹಾವೇರಿ, ಜು. 7
ರಾಜ್ಯದವರೇ ಆದ ಸದಾನಂದಗೌಡ ಅವರು ರೇಲ್ವೆ ಸಚಿವರಾಗಿರುವುದು ಮಂಗಳವಾರ ಮಂಡನೆಯಾಗಲಿರುವ ರೇಲ್ವೆ ಬಜೆಟ್ ಮೇಲೆ ಜಿಲ್ಲೆ ಹಾಗೂ ಲೋಕಸಭಾ ವ್ಯಾಪ್ತಿಯ ಜನರ ನಿರೀಕ್ಷೆ ಹೆಚ್ಚಿಸಿದೆ. ಹೊಸ ರೈಲು ಮಾರ್ಗ, ಸಮೀಕ್ಷೆ, ಅನುದಾನ ದೊರೆಯುವ ಆಶಾಭಾವ ಹೊಂದಿದ್ದಾರೆ.
ಪ್ರತಿ ಬಾರಿಯ ರೇಲ್ವೆ ಬಜೆಟ್ ಸಂದರ್ಭದಲ್ಲೂ ನಿರೀಕ್ಷೆಗಳು ಗರಿಗೆದರುತ್ತವೆ. ಆದರೆ ಸಿಕ್ಕಿದ್ದು ಮಾತ್ರ ಅಷ್ಟಕ್ಕಷ್ಟೇ.
ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಸಚಿವರಾಗಿ ಹೈಕ ಭಾಗಕ್ಕೆ ಹೆಚ್ಚಿನ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ಸದಾನಂದಗೌಡರಿಂದಲೂ ಅದೇ ನಿರೀಕ್ಷೆಗಳನ್ನು ಜನ ಎದುರು ನೋಡುತ್ತಿದ್ದಾರೆ. ಅಲ್ಲದೇ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಈಗಾಗಲೇ ಸದಾನಂದಗೌಡರನ್ನು ಭೇಟಿಯಾಗಿ ಸ್ಥಳೀಯ ಜನರ ಬೇಡಿಕೆಗಳನ್ನು ಈ ಸಲದ ಬಜೆಟ್ನಲ್ಲಿ ಈಡೇರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಹೊಸ ಮಾರ್ಗದ ಬೇಡಿಕೆ: ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗದಗ, ಮುಂಡರಗಿ, ಹಡಗಲಿ, ಹರಪನಹಳ್ಳಿ, ಹರಿಹರ ನೂತನ ರೈಲು ಮಾರ್ಗ ರಚನೆಗೆ ಸಂಬಂಧಿಸಿದಂತೆ ಸಮೀಕ್ಷೆ ಆಗಬೇಕಿದೆ. ಈ ಮಾರ್ಗ ನಿರ್ಮಾಣವಾದರೆ ಗದಗ, ಬಾಗಲಕೋಟೆ, ಬಿಜಾಪುರ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಭಾಗದ ವಾಣಿಜ್ಯ ಬೆಳವಣಿಗೆಗಾಗಿ ನೂತನ ರೈಲು ಮಾರ್ಗ ಅವಶ್ಯವಿದೆ. ಇದರಿಂದ ಸುತ್ತಲಿನ ಜಿಲ್ಲೆಗಳ ಜತೆಗೆ ಹಾವೇರಿಗೂ ಹೆಚ್ಚಿನ ಆದ್ಯತೆ ಸಿಗುತ್ತದೆ.
ಸಮೀಕ್ಷೆ, ಜೋಡಣೆ: ಶಿವಮೊಗ್ಗ, ಶಿಕಾರಿಪುರ, ಹಾನಗಲ್ಲ, ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ನೂತನ ರೈಲು ಮಾರ್ಗದ ಸಮೀಕ್ಷೆ ಕಾರ್ಯ ಆಗಬೇಕಿದೆ. ಈ ಯೋಜನೆಯಿಂದ ಹುಬ್ಬಳ್ಳಿಯಿಂದ ನೇರವಾಗಿ ಶಿವಮೊಗ್ಗಕ್ಕೆ ಸಂಪರ್ಕ ಸಾಧ್ಯವಾಗಲಿದ್ದು, ಹಾವೇರಿ ಜಿಲ್ಲೆಗೂ ಅನುಕೂಲವಾಗಲಿದೆ. ಕಳೆದ ರೈಲ್ವೆ ಬಜೆಟ್ನಲ್ಲಿ ಘೋಷಣೆಯಾದ ಈ ಭಾಗದ ಬಹುದಿನದ ಬೇಡಿಕೆಯಾದ ಗದಗ-ಹಾವೇರಿ ನೂತನ ರೈಲು ಮಾರ್ಗದ ಜೋಡಣೆಗೆ ಈ ಬಾರಿ ಹಣ ಬಿಡುಗಡೆ ಮಾಡಬೇಕು. ಇದರಿಂದ ಗದಗ ಹಾಗೂ ಹಾವೇರಿ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಸಹಾಯಕವಾಗಲಿದೆ.
ಮೂಲಸೌಲಭ್ಯ ಬೇಕು: ಗದಗ, ಯಲವಿಗಿ, ಬ್ಯಾಡಗಿ, ಹಾವೇರಿ, ರಾಣಿಬೆನ್ನೂರ, ದೇವರಗುಡ್ಡ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೂಕ್ತ ಮೂಲಭೂತ ಸೌಲಭ್ಯಗಳು ಇಲ್ಲದಂತಾಗಿದೆ. ಕೆಲವು ಕಡೆಗಳಲ್ಲಿ ರೇಲ್ವೆ ಮೇಲ್ಸೇತುವೆಯ ಅಗತ್ಯವಿದ್ದು, ಸಿಗ್ನಲ್ ರಹಿತ ಕ್ರಾಸ್ಗಳಲ್ಲಿ ಸುರಕ್ಷತೆಗೂ ಆದ್ಯತೆ ಸಿಗಬೇಕು. ಸವಣೂರು ಸೇರಿದಂತೆ ಅನೇಕ ನಿಲ್ದಾಣಗಳಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಯಾಗುತ್ತಿಲ್ಲ. ಪ್ರಮುಖ ರೈಲುಗಳ ನಿಲುಗಡೆಗೂ ಕ್ರಮ ಕೈಗೊಳ್ಳಬೇಕಿದೆ. ಗದಗ ಜಿಲ್ಲೆ ಹಳ್ಳಿಗುಡಿ ರೈಲ್ವೆ ನಿಲ್ದಾಣವನ್ನು ಮತ್ತೆ ಆರಂಭಿಸಬೇಕು ಎಂಬ ಒತ್ತಾಯವಿದೆ. ಯಲವಿಗಿ ಹಾಗೂ ಬ್ಯಾಡಗಿ ನಿಲ್ದಾಣದಲ್ಲಿ ಧಾರವಾಡ-ಬೆಂಗಳೂರ ಇಂಟರ್ಸಿಟಿ ಹಾಗೂ ರಾಣಿಚನ್ನಮ್ಮ ರೈಲುಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕಿದೆ.
ಸಂಸದರು ಹಾಗೂ ಕ್ಷೇತ್ರದ ಜನರ ನಿರೀಕ್ಷೆಗಳು ಎಷ್ಟು ಈಡೇರುತ್ತವೆ ಎಂಬುದು ಮಂಗಳವಾರ ಗೊತ್ತಾಗಲಿದೆ.
-ನಾರಾಯಣ ಹೆಗಡೆ