ಹಾವೇರಿ: ಬೆಂಗಳೂರಿನ ಪುಲಿಕೇಶಿ ನಗರ, ಮಾರತ್‌ಹಳ್ಳಿಯಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ನಾಸೀರ್ ಹೈದರ್‌ನನ್ನು ಗಲ್ಲಿಗೇರಿಸಬೇಕು, ಉಳಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಎಚ್ ಕಾಲೇಜಿನ ಎದುರು ಎಬಿವಿಪಿ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಮಾತನಾಡಿ, ಬೆಂಗಳೂರಿನ ಪುಲಕೇಶಿನಗರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ 22 ವರ್ಷದ ಸ್ನಾತ್ತಕೋತ್ತರ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಪ್ರಕರಣದ ಆರೋಪಿ ನಾಸೀರ್ ಹೈದರ್‌ನನ್ನು ಗಲ್ಲಿಗೇರಿಸಬೇಕು. ಉಳಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಈ ಪ್ರಕರಣಗಳ ಬೆನ್ನಲ್ಲೇ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಮಾರತ್‌ಹಳ್ಳಿ ಬಳಿಯ ತೂಬರಹಳ್ಳಿ ಸಮೀಪ ನಡೆಸಿದ ಅತ್ಯಾಚಾರ ಹಾಗೂ ಬೈಂದೂರಿನ ಆಲಂದೂರಿನ ರತ್ನಾ ಎಂಬ ಪಿಯುಸಿ ವಿದ್ಯಾರ್ಥಿನಿ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತದ್ದು. ಈ ರೀತಿ ಪ್ರಕರಣಗಳು ಸಂಭವಿಸಿದರೂ ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಡೆದುಕೊಳ್ಳುವ ರೀತಿ ಹಾಗೂ ಗೃಹ ಸಚಿವರು ಕೊಡುತ್ತಿರುವ ಹಾರಿಕೆಯ ಆಶ್ವಾಸನೆ ನೋಡಿದರೆ ಜನರಿಗೆ ಇಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊಲೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಬ್ಲಾಕ್‌ಮೇಲ್, ಹಿಂಸೆ ಮೊದಲಾದ ಲೈಂಗಿಕ ಕ್ರೌರ್ಯಗಳಿಗೆ ಅಂತ್ಯ ಹಾಡಲು ಸರ್ಕಾರ ಮುಂದಾಗಬೇಕು. ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಅತ್ಯಾಚಾರದ ಪ್ರಕರಣಗಳ ಕುರಿತು ಕೇವಲ ಚರ್ಚೆಯಾಗದೇ, ಸಾಮಾಜಿಕ ಬದ್ಧತೆ ತೋರಿಸಬೇಕು. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಬಲ ಕಾನೂನು ರೂಪಿಸಬೇಕು. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಭಿಷೇಕ ಉಪ್ಪಿನ್, ಕಿರಣ ಕೊಣನವರ, ಪವನ ತಿಪಶಟ್ಟಿ, ಶ್ರೀನಿವಾಸ ದೇಸಾಯಿ, ಶರಣಪ್ಪ ದ್ಯಾಮನಕೊಪ್ಪ ಇತರರಿದ್ದರು.
Advertisement