ರಾಣಿಬೆನ್ನೂರು: ನಗರದಲ್ಲಿ ಕಳೆದು ಮೂರು ನಾಲ್ಕು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಇಲ್ಲಿನ ತಾಪಂ ವಸತಿಗೃಹದ ಹಿಂಭಾಗದ ಕಾಂಪೌಂಡ್ ಪಕ್ಕದ ಎಕೆಜಿ ಕಾಲೋನಿ ಹೆಂಚಿನ ಮನೆ ಮೇಲೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ತಾಯಿ ಮತ್ತು ಮಗು ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಗುರುವಾರ ಬೆಳಗಿನ ಜಾವ ಸಂಭವಿಸಿದೆ.
ಮೃತ ಮಹಿಳೆಯನ್ನು ಎಕೆಜಿ ಕಾಲೋನಿಯ ರಸುಲ್ಲಾಂಬಿ ಜಾಫರ್‌ಸಾಬ್ ಬೆಳವಿಗೆ (45) ಹಾಗೂ ಮಗಳು ಫಾತಿಮಾಬಿ ಜಾಫರ್‌ಸಾಬ್ ಬೆಳವಿಗಿ (2) ಎಂದು ಗುರುತಿಸಲಾಗಿದೆ. ಜಾಫರ್ ಸಾಬ್ ಬೆಳವಿಗಿ, ಜೈಬುನ್ನಿಸಾ ಮುಲ್ಲಾ, ನಸೀಮಾಬಾನು ಬೆಳವಿಗಿ ಮತ್ತು ಸಾನಿಯಾ ಮುಲ್ಲಾ ಇವರು ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪರಿಹಾರದ ಘೋಷಣೆ: ಪೊಲೀಸ್ ಹಾಗೂ ಅಗ್ನ್ನಿಶಾಮಕದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ, ಶವಗಳನ್ನು ಹೊರತಂದರು. ತಹಸೀಲ್ದಾರ್ ಕೆ. ಶಿವಲಿಂಗು ಅವರು ಘಟನಾ ಸ್ಥಳಕ್ಕೆ ಆಗಮಿಸಿ ಮೃತರಾದವರಿಗೆ ತಲಾ ರು. 1.5 ಲಕ್ಷ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದರು. ನಗರಸಭೆ ಪ್ರಭಾರಿ ಅಧ್ಯಕ್ಷ ಶಿವಪ್ಪ ಮಣೇಗಾರ, ನಗರಸಭೆ ಸದಸ್ಯರಾದ ಬಸವರಾಜ ಹುಚಗೊಂಡರ, ಸ್ಥಾಯಿ ಸಮಿತಿ ಅಧ್ಯಕ್ಷ ನಸರುಲ್ಲಾಮುಲ್ಲಾ, ಪೌರಾಯುಕ್ತರಾದ ರವೀಂದ್ರ ಮಲ್ಲಾಪುರ, ಎಂಜಿನಿಯರ್ ಎಂ.ವಿ. ಗಿರಡ್ಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ಕೃಷ್ಣಮೂರ್ತಿ, ಜಿಲ್ಲಾ ವರಿಷ್ಠಾಧಿಕಾರಿ ಶಶಿಕುಮಾರ ಎನ್., ಡಿವೈಎಸ್‌ಪಿ ಎಸ್. ಗಡಾದ, ಕಂದಾಯ ಇಲಾಖೆಯ ಎಂ.ಎಸ್. ಕಡೂರ, ಮಂಜುನಾಥ ಕೆಂಚರಡ್ಡಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಹಾಗೂ ಸದಸ್ಯರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Advertisement