ಬ್ಯಾಡಗಿ: ಕಾಲಮಿತಿಯೊಳಗೆ ಪೂರ್ಣಗೊಳ್ಳದ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ ನಿರ್ಮಿಸಿರುವ ಕಾಲುವೆಗಳು ಸೃಷ್ಟಿಸಿದ ಅವಾಂತರದಿಂದ ನೂರಾರು ಏಕರೆ ಕೃಷಿಭೂಮಿಯಲ್ಲಿನ ಹತ್ತಿ, ಗೋವಿನಜೋಳ ಇತರ ಬೆಳೆ ನಾಶವಾಗಿದ್ದು, ರೈತರು ಹಿಡಿಶಾಪ ಹಾಕಿದ ಘಟನೆ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಏತ ನೀರಾವರಿ ಯೋಜನೆಯಡಿ ನಿರ್ಮಿಸಿರುವ ಕಾಲುವೆಗಳಲ್ಲಿ ನೀರು ನಿಂತಿದ್ದೇ ಬೆಳೆ ನಾಶವಾಗಲು ಕಾರಣವೆಂಬುದು ಕೃಷಿಕರ ಆರೋಪ. ಕಾಲುವೆಯಲ್ಲಿನ ನೀರು ಕೆಲವೆಡೆ ಹೊಲದೊಳಕ್ಕೆ ನುಗ್ಗಿದ್ದರೆ ಇನ್ನೂ ಕೆಲವೆಡೆ ನೀರು ಬಸಿದು ಕೃಷಿಕರ ಜಮೀನಿನಲ್ಲಿ ಮೊಣಕಾಲುದ್ದ ಸಂಗ್ರಹಗೊಂಡಿದ್ದು, ಇದರಿಂದ ನೂರಾರು ಎಕರೆ ಪ್ರದೇಶದಲ್ಲಿ ನೀರು ನಿಂತಿದ್ದು, ಬಿತ್ತನೆ ಮಾಡಿದ ರೈತರು ದಿಕ್ಕು ತೋಚದೇ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ತಾಲೂಕಿನ ಹಿರೇಅಣಜಿ, ತುಮರಿಕೊಪ್ಪ, ಚಿಕ್ಕಳ್ಳಿ ಸೇರಿದಂತೆ ಕಾಲುವೆ ಹಾಯ್ದು ಹೋಗಿರುವ ಬಹುತೇಕ ಗ್ರಾಮಗಳ ರೈತರ ಗೋಳು ಇದೆ ಆಗಿದೆ. ತರಾತುರಿಯಲ್ಲಿ ಕಾಲುವೆ ನಿರ್ಮಿಸಿ ಅವುಗಳಿಗೆ ನೀರು ಹರಿಸದೇ ಬಿಟ್ಟಿರುವುದರಿಂದ ಕೃಷಿಭೂಮಿಗೆ ನೀರು ನುಗ್ಗಲು ಕಾರಣವಾಗಿದೆ.
ದುರಸ್ತಿಗೊಳಿಸಿ, ಇಲ್ಲವೇ ಮುಚ್ಚಿ: ರಾಜ್ಯ ರೈತ ಸಂಘದ ಸದಸ್ಯ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲ ಕಲ್ಪಿಸಿದ್ದೇ ಹೆಚ್ಚು ಪ್ರತಿವರ್ಷವೂ ರೈತರು ಇದೇ ಗೋಳನ್ನು ಅನುಭವಿಸುವಂತಾಗಿದೆ ಎಂದರು. ಕೂಡಲೇ ಕಾಲುವೆ ದುರಸ್ತಿಗೊಳಿಸಿ ಇಲ್ಲವೆ ಕಾಲುವೆಗಳನ್ನು ಮುಚ್ಚುವಂತೆ ಆಗ್ರಹಿಸಿದರು.
ನೀರು ಹರಿಸಿದ್ದು ಸಾಕು: ತಾಲೂಕಿನ 22 ಗ್ರಾಮಗಳ 13 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಸದರಿ ಯೋಜನೆ 2005ರಲ್ಲಿ ಪ್ರಾರಂಭವಾಗಿದ್ದು, ಕೇವಲ 20 ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಕಾರಣಾಂತರದಿಂದ 9 ವರ್ಷ ಗತಿಸಿದರೂ ರೈತರಿಗೆ ಹನಿ ನೀರು ಕೊಡಲು ಸಾಧ್ಯವಾಗಿಲ್ಲ. ಯೋಜನೆಯಡಿ ರೈತರಿಗೆ ನೀರು ಹರಿಸಿದ್ದು ಸಾಕು ಕಾಲುವೆಗಳನ್ನು ಮುಚ್ಚಿ ಅದರ ಅಕ್ಕಪಕ್ಕದಲ್ಲಿರುವ ರೈತರನ್ನು ಬದುಕಲು ಬಿಡುವಂತೆ ಆಗ್ರಹಿಸಿದರು.
ಪರಿಹಾರ ನೀಡಿ: ಮಲ್ಲೇಶಪ್ಪ ಡಂಬಳ ಮಾತನಾಡಿ, ಕಳೆದ ವರ್ಷವೂ ಇದೇ ರೀತಿ ನೀರು ನುಗ್ಗಿದಾಗ ಕೇವಲ ಸಮೀಕ್ಷೆ ನಡೆಸಿದ ತಾಲೂಕಾಡಳಿತ ಹಾನಿಗೆ ಪರಿಹಾರದ ಬಿಡಿಗಾಸು ನೀಡಲಿಲ್ಲ. ಯೋಜನೆ ಪೂರ್ಣಗೊಳ್ಳುವವರೆಗೂ ರೈತರಿಗೆ ಈ ಗೋಳು ತಪ್ಪಿದ್ದಲ್ಲ. ಯಾವ ಪುರುಷಾರ್ಥಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಪ್ರಶ್ನಿಸಿದ ಅವರು, ಕೂಡಲೇ ಹಾನಿ ಸಮೀಕ್ಷೆ ನಡೆಸಿ ಕಳೆದ ವರ್ಷದ ಹಾಗೂ ಪ್ರಸ್ತುತ ಸಾಲಿನ ಪರಿಹಾರ ನೀಡುವಂತೆ ಆಗ್ರಹಿಸಿದರು.
ಇಚ್ಛಾಶಕ್ತಿ ಕೊರತೆ: ಗುಡ್ಡದಮಲ್ಲಾಪುರ ಯೋಜನೆಗಿಂತ ತಡವಾಗಿ ಆರಂಭವಾದ ಶಿಗ್ಗಾಂವಿ ಏತ ನೀರಾವರಿ ಯೋಜನೆ ಈಗಾಗಲೇ ಕಾರ್ಯಾರಂಭ ಮಾಡಿದೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕುಂಟುತ್ತಾ ಸಾಗಿರುವ ಯೋಜನೆ ಇನ್ನೂ ಯಾವ್ಯಾವ ಅವಾಂತರ ಸೃಷ್ಟಿಸಲಿದೆಯೋ ಕಾದು ನೋಡಬೇಕಾಗಿದೆ. ಈಗಾಗಲೇ 6 ಜನ ಮುಖ್ಯಮಂತ್ರಿಗಳು 4 ಜನ ಶಾಸಕರು ಅಧಿಕಾರ ಅನುಭವಿಸಿದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ ಎಂದರು.
ಈ ಸಂದರ್ಭ ರುದ್ರೇಶ್ ಕುಳವಳ್ಳಿ, ಚಂದ್ರಶೇಖರ ಶಿಂಗಾಪುರ, ಶಿವಾನಂದ ಬನ್ನಿಹಟ್ಟಿ, ಮಾಂತಯ್ಯ ಹಿರೇಮಠ, ಮಹಾಂತೇಶ ಬಿಸಲಳ್ಳಿ, ಶಿವಪ್ಪ ದೊಡ್ಮನಿ, ಕೆಂಚನಗೌಡ ಪಾಟೀಲ, ಮುರುಗೇಶ್ ಡಂಬಳ, ಬಸವರಾಜ ವಾರದ, ರುದ್ರಸ್ವಾಮಿ ಹಿರೇಮಠ, ರಾಜು ಮಟ್ಟಿ, ಪರಮೇಶಪ್ಪ ಬನ್ನಿಹಟ್ಟಿ, ಬಸನಗೌಡ ಪಾಟೀಲ, ಮಾಲತೇಶ ವಾರದ ಇತರರಿದ್ದರು.
Advertisement