ದುಷ್ಕರ್ಮಿಗಳಿಂದ ಹಂದಿಗಳಿಗೆ ವಿಷ

Updated on

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 31
ಮಹಾನಗರ ಪಾಲಿಕೆ ಹಾಗೂ ಹಂದಿ ಮಾಲೀಕರ ಕೋಳಿ ಜಗಳದ ಮಧ್ಯೆ ಇದೀಗ ಹಂದಿಗಳ ಪ್ರಾಣಕ್ಕೆ ಸಂಕಟ ಒದಗಿ ಬಂದಿದೆ.
ನಗರದಲ್ಲಿ 15 ದಿನಗಳಿಂದ ಆಗಾಗ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸಿದರೂ ಯಾರೋ ದುಷ್ಕರ್ಮಿಗಳು ಹತ್ತಾರು ಹಂದಿಗಳಿಗೆ ವಿಷ ಉಣಿಸಿ ಕೊಂದಿರುವ ಅಮಾನವೀಯ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ನಗರದ ಜರ್ಮನ್ ಆಸ್ಪತ್ರೆ ಬಳಿ ವಿಷಪೂರಿತ ಆಹಾರ ಸೇವಿಸಿದ ಹತ್ತಾರು ಹಂದಿಗಳು ಸತ್ತು ಬಿದ್ದಿದ್ದವು. ಪಾಲಿಕೆ ಸಿಬ್ಬಂದಿ ಅವುಗಳನ್ನು ವಾಹನದಲ್ಲಿ ಒಯ್ದು ತೆರವುಗೊಳಿಸಿದರು. ಈ ಸುದ್ದಿ ತಿಳಿದು ಹಂದಿಗಳ ಮಾಲೀಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಪಾಲಿಕೆ ವತಿಯಿಂದಲೇ ಹಂದಿಗಳಿಗೆ ವಿಷ ಉಣಿಸಲಾಗಿದೆ ಎಂದು ಆರೋಪಿಸಿದರು.
ಒಂದು ವಾರ ಹಂದಿಗಳ ಕಾರ್ಯಾಚರಣೆ ನಿಲ್ಲಿಸಿ ಗುರುವಾರಷ್ಟೇ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಇದೇ ಸಂದರ್ಭದಲ್ಲಿ ಹಂದಿಗಳಿಗೆ ವಿಷ ಉಣಿಸಿದ್ದು ಸೋಜಿಗದ ಸಂಗತಿ. ಪಾಲಿಕೆ ವತಿಯಿಂದ ಹಂದಿಗಳನ್ನು ಹಿಡಿಯಲಾಗುತ್ತಿದೆಯೇ ಹೊರತು ಅವುಗಳನ್ನು ಕೊಲ್ಲುತ್ತಿಲ್ಲ. ಅವುಗಳಿಗೆ ವಿಷ ಉಣಿಸಿ ಕೊಲ್ಲುವಷ್ಟು ಪಾಲಿಕೆ ಕೆಟ್ಟದ್ದಲ್ಲ ಎಂದು ಮೇಯರ್ ಶಿವು ಹಿರೇಮಠ ಸ್ಪಷ್ಟನೆ ನೀಡಿದ್ದಾರೆ.
280ಕ್ಕೂ ಹೆಚ್ಚು ಹಂದಿ ಬಲೆಗೆ...
ಈ ಮಧ್ಯೆ ಗುರುವಾರ ಪಾಲಿಕೆ ವತಿಯಿಂದ ವಾಡ್ ನಂ. 2, 6ರ ಹಲವು ಪ್ರದೇಶಗಳಲ್ಲಿ ತುಮಕೂರಿನ ಚಿಕ್ಕನಾಯಕನಹಳ್ಳಿಯಿಂದ ಬಂದ ತಂಡ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರ ಸಹಕಾರದಿಂದ 280ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದಿದ್ದಾರೆ. ನಗರದ ಮದಿಹಾಳ, ಮೇದಾರ ಓಣಿ, ಹಾವೇರಿಪೇಟೆ, ಮುರುಘಾಮಠ ಸುತ್ತಮುತ್ತ, ಮಾಳಾಪುರ, ಸನ್ಮತಿ ನಗರ, ನಾರಾಯಣಪುರ ನಗರದ ಬಳಿ ಹಂದಿಗಳನ್ನು ಹಿಡಿಯಲಾಯಿತು. ಪಾಲಿಕೆ ಸದಸ್ಯ ಯಾಸೀನ ಹಾವೇರಿಪೇಟ, ಎಸಿಪಿ ಎಚ್.ಸಿ. ಕೇರಿ, ಪಿಎಸ್‌ಐ ಪರಶುರಾಮ ಪೂಜೇರಿ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com