ಮಾನಸಿಕ ಸ್ಥಿಮಿತ ಕಳಕೊಂಡ ಮುಖ್ಯಮಂತ್ರಿ: ಕಾಗೇರಿ

Updated on

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 31
ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನಸಿಕ ಸಮತೋಲನ ಕಳೆದುಕೊಂಡ ರೀತಿ ವರ್ತಿಸುತ್ತಿದ್ದಾರೆಂದು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಧಾರವಾಡದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ವರ್ಷ ಸಾತ್ವಿಕ ರಾಜಕಾರಣಿಗಳಂತೆ ಫೋಸು ನೀಡುತ್ತಿದ್ದ ಸಿದ್ದರಾಮಯ್ಯ ಅವರ ಮುಖವಾಡ ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಶನ್ ಹಗರಣದಿಂದ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದರೆ, ಅವರ ಬಗ್ಗೆ ಮುಖ್ಯಮಂತ್ರಿ ತೀರಾ ಹಗುರವಾಗಿ ಮಾತನಾಡಿದ್ದಾರೆ. ಈ ವರ್ತನೆ ಅವರ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ. ಅವರು ತಮ್ಮ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ಮಾತನಾಡಲಿ ಎಂದರು.
ರಾಜ್ಯ ಸರ್ಕಾರ ಮೇಲೆ ಭ್ರಮನಿರಸನ ಒಂದೂವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕಾಂಗ್ರೆಸ್ಸಿಗರು ರಾಜ್ಯವನ್ನು ಸುಸೂತ್ರವಾಗಿ ನಡೆಸಲು ವಿಫಲರಾಗಿದ್ದು, ಅಸಮರ್ಥರೆಂದು ರಾಜ್ಯದಲ್ಲಿ ನಡೆಯುತ್ತಿರುವ ಸಂಗತಿಗಳಿಂದ ಸಾಮಾನ್ಯ ಜನರಿಗೂ ಗೊತ್ತಾಗಿದೆ. ಜನಪ್ರಿಯ ಕೆಲವು ಯೋಜನೆಗಳನ್ನು ಹೊರತುಪಡಿಸಿದರೆ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವ ಯೋಜನೆಗಳನ್ನೂ ಜಾರಿಗೆ ತಂದಿಲ್ಲ. ಬಿಜೆಪಿ ಸರ್ಕಾರ ತಂದ ಹಲವು ಜನಪ್ರಿಯ ಯೋಜನೆಗಳನ್ನು ಕೈಬಿಟ್ಟರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಿನಿಂದ ಸರ್ಕಾರದ ಮೇಲೆ ವಿಶ್ವಾಸ ಬರುವ ಯಾವ ಪ್ರಯತ್ನ ನಡೆಯಲಿಲ್ಲ. ಸಿಎಂ, ಸಚಿವ, ಶಾಸಕರ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸವಾಗಲಿಲ್ಲ. ಹೀಗಾಗಿ ಆಡಳಿತ ನಿಂತ ನೀರಾಗಿದೆ. ಸರ್ಕಾರದ ಕಾರ್ಯ ವೈಖರಿಗೆ ಬಗ್ಗೆ ರಾಜ್ಯದ ಜನತೆಗೆ ಭ್ರಮನಿರಸನವಾಗಿದೆ ಎಂದರು.
ರಾಜಿನಾಮೆ ನೀಡಲಿ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆಯನ್ನು ಮುಖ್ಯಮಂತ್ರಿ, ಗೃಹ ಸಚಿವರನ್ನು ಬಿಟ್ಟು 3ನೇ ವ್ಯಕ್ತಿ ನಡೆಸುತ್ತಿದ್ದಾನೆಯೇ ಎನಿಸುತ್ತಿದೆ. ಪೊಲೀಸ್ ಇಲಾಖೆ ಮೇಲೆ ನಿಯಂತ್ರಣವೇ ಇಲ್ಲ. ದಿನ ಬೆಳಗಾದರೆ ಅತ್ಯಾಚಾರಗಳ ಸುದ್ದಿಯೇ ಕಣ್ಣಿಗೆ ಚುಚ್ಚುತ್ತವೆ. ನಮಗೆ ರಕ್ಷಣೆ ಇದೆ ಎಂದು ಅಪರಾಧಿ ಮನಸ್ಸುಳ್ಳುವರು ಕಾಂಗ್ರೆಸ್ ಆಡಳಿತದಲ್ಲಿ ಪುಂಡಾಟಿಕೆ ತೋರುತ್ತಿದ್ದಾರೆ. ಅಪರಾಧಿಗಳ ಮೇಲೆ ಬಿಗುವಿನ ಕ್ರಮ ಹಾಗೂ ಇಚ್ಛಾಶಕ್ತಿ ಕೊರತೆ ಕಾರಣದಿಂದ ರಾಜ್ಯದಲ್ಲಿ ದುಷ್ಕೃತ್ಯಗಳು ನಡೆಯುತ್ತಿವೆ. ಕೂಡಲೇ ಗೃಹ ಮಂತ್ರಿ, ಮುಖ್ಯಮಂತ್ರಿ ರಾಜಿನಾಮೆ ನೀಡಬೇಕೆಂದು ಕಾಗೇರಿ ಆಗ್ರಹಿಸಿದರು.
ಶಿಕ್ಷಣ ಇಲಾಖೆ ಸಚಿವನಾಗಿ ಕಳೆದ ಅವಧಿಯಲ್ಲಿ ಕಾರ್ಯ ಮಾಡಿದ್ದು, ಈಗಿನ ಶಿಕ್ಷಣ ಇಲಾಖೆ ಸ್ಥಿತಿ ಬಗ್ಗೆ ಅಸಮಾಧಾನವಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃ ಭಾಷೆ ಕಡ್ಡಾಯ ಕುರಿತಂತೆ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಬೇಕಾಯಿತು. ಕಡ್ಡಾಯ ಶಿಕ್ಷಣ ಹಕ್ಕು ವಿಷಯದಲ್ಲಿ ರಾಜ್ಯ ಸರ್ಕಾರ ಸರಿಯಾದ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ನಾನು ಸಚಿವನಾಗಿದ್ದಾಗಿನ ಹಲವು ಯೋಜನೆಗಳನ್ನು ಕೈ ಬಿಡಲಾಗಿದೆ. 26 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದ್ದೂ ಕನಿಷ್ಠ ಅತಿಥಿ ಶಿಕ್ಷಕರನ್ನು ಸರ್ಕಾರ ನೇಮಿಸಿಕೊಳ್ಳುತ್ತಿಲ್ಲ. ಸರ್ಕಾರದಲ್ಲಿ ಶಿಕ್ಷಣ ಕ್ಷೇತ್ರವೂ ನಿರ್ಲಕ್ಷಿತ ಕ್ಷೇತ್ರವಾಗಿದೆ ಎಂದು ಕಾಗೇರಿ ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಪ್ರಕಾಶ ಗೋಡಬೋಲೆ, ಮೋಹನ ರಾಮದುರ್ಗ, ವಿಜಯಾನಂದ ಶೆಟ್ಟಿ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com