ಹುಬ್ಳಿ ಕೋರ್ಟ್‌ಗೆ ಭಟ್ಕಳ್ ಹಾಜರು

Published on

ಹುಬ್ಬಳ್ಳಿ: ಸಿಮಿ ಸಂಘಟನೆ ಕಾರ್ಯಕರ್ತರೊಂದಿಗೆ ಸೇರಿ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ ಯಾಸಿನ್ ಭಟ್ಕಳ್ ಗುರುವಾರ ನಗರದ ಒಂದನೇ ಜೆಎಂಎಫ್‌ಸಿ ಕೋರ್ಟ್ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಹೇಳಿಕೆ ನೀಡಿದ್ದಾನೆ.
ದೆಹಲಿ ಜೈಲಿನಲ್ಲಿರುವ ಐಎಂ ಕಮಾಂಡರ್ ಯಾಸಿನ್ ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ಕೋರ್ಟ್ ಎದುರು ಹಾಜರಾಗಿದ್ದಾನೆ. 2009ರಲ್ಲೇ ಪ್ರಕರಣ ದಾಖಲಾಗಿದ್ದರೂ 2013ರ ವರೆಗೆ ಭೂಗತನಾಗಿದ್ದ ಯಾಸಿನ್‌ನನ್ನ್ನು ತಮಗೆ ಒಪ್ಪಿಸಲು ರಾಜ್ಯದ ಪೊಲೀಸರು ರಾಷ್ಟ್ರೀಯ ತನಿಖಾ ದಳಕ್ಕೆ ಕೋರಿದ್ದರು. ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಯಾಸಿನ್‌ನನ್ನು ಹಾಜರುಪಡಿಸಲಾಯಿತು. ವಿಚಾರಣೆ ವೇಳೆ ಉಗ್ರ ಯಾಸಿನ್, ತಮಗೂ ಪ್ರಕರಣಕ್ಕೂ ಸಂಬಂಧವಿಲ್ಲ. ತಮ್ಮ ಪರವಾಗಿ ವಾದ ಮಂಡಿಸಲು ವಕೀಲರೂ ಇಲ್ಲ ಎಂದು ಹೇಳಿಕೆ ನೀಡಿದ. ಕಾನೂನು ಸೇವಾ ಪ್ರಾಧಿಕಾರದ ನೆರವು ಬೇಕೆ? ಎಂದು ಕೋರ್ಟ್ ಕೇಳಿದಾಗ, ಹೌದು ಎಂದು ಹೇಳಿದರು.
ನ್ಯಾ. ಪದ್ಮಾ ಮುನೋಳಿ ವಿಚಾರಣೆಯನ್ನ್ನು ಆಗಸ್ಟ್ 25ಕ್ಕೆ ಮುಂದೂಡಿದರು.
ಹಿನ್ನೆಲೆ: ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ ಸಿಮಿ ಸಂಘಟನೆಯ 14 ಶಂಕಿತ ಉಗ್ರರಿಗೆ ಮುಖ್ಯಸ್ಥನಾಗಿದ್ದ ಎಂದು ಹುಬ್ಬಳ್ಳಿ, ಹೊನ್ನಾಳಿ ಪೊಲೀಸರು 2009ರಲ್ಲಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಯಾಸಿನ್ ಭಟ್ಕಳ ಪ್ರಮುಖ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದ 7 ಜನರು ಅಹಮದಾಬಾದ್, ಮತ್ತಿತರ ಜೈಲುಗಳಲ್ಲಿ ಬಂಧಿಯಾಗಿದ್ದಾರೆ. ಉಳಿದ 7 ಶಂಕಿತ ಉಗ್ರರನ್ನುಗುರುವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕಳೆದ ವರ್ಷ ಆಗಸ್ಟ್‌ನಲ್ಲಿ ನೇಪಾಳ ಗಡಿಯಲ್ಲಿ ಬಂಧಿತನಾಗಿರುವ ಯಾಸಿನ್ ಭಟ್ಕಳನನ್ನು ತಮ್ಮ ವಶಕ್ಕೆ ನೀಡುವಂತೆ ರಾಜ್ಯ ಪೊಲೀಸರು ಸಲ್ಲಿಸಿದ ಮನವಿಯನ್ನು ರಾಷ್ಟ್ರೀಯ ತನಿಖಾ ದಳದ ಮುಖ್ಯಸ್ಥರು ತಿರಸ್ಕರಿಸಿದ್ದರು. ಆದರೆ, ದಿಲ್ಲಿ ಸೆಂಟ್ರಲ್ ಜೈಲಿನಲ್ಲಿರುವ ಯಾಸಿನ್ ಭಟ್ಕಳ್‌ನನ್ನು ಹುಬ್ಬಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅದು ಸಮ್ಮತಿಸಿತ್ತು.
ಸಾಕ್ಷಿ ಹೇಳಿದ ಖೋತ್
ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಾಗೂ ರಾಜ್ಯದ ಹಲವೆಡೆ ಬಂಧನಕ್ಕೆ ಒಳಗಾಗಿದ್ದ ಸಿಮಿ ಸಂಘಟನೆಯ ಶಂಕಿಯ ಉಗ್ರರ ಕುರಿತಾದ ಪ್ರಕರಣ ಗುರುವಾರ ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂತು.
ಸಿಐಡಿಯ ಹಿಂದಿನ ತನಿಖಾಧಿಕಾರಿಯಾಗಿದ್ದ ನಿವೃತ್ತ ಡಿವೈಎಸ್ಪಿ ಎಸ್.ಎಸ್. ಖೋತ್ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರು. ಬಂಧಿತ ಆರೋಪಿಗಳ ಪೈಕಿ ಮೊಹಮದ್ ಆಸಿಫ್ ಹುಬ್ಬಳ್ಳಿಯಲ್ಲೇ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿರುವ ಕುರಿತಂತೆ ಸಂಗ್ರಹಿಸಿರುವ ದಾಖಲೆಗಳನ್ನು ಖೋತ್ ನ್ಯಾಯಾಲಯಕ್ಕೆ ನೀಡಿದರು.
2008ರಲ್ಲಿ ಹುಬ್ಬಳ್ಳಿ ಮತ್ತು ಹೊನ್ನ್ನಾಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಹಿನ್ನ್ನಲೆಯಲ್ಲಿ ಸಿಐಡಿ ಅಧಿಕಾರಿ ಖೋತ್ 8 ತಿಂಗಳ ವರೆಗೆ ಪ್ರಕರಣದ ತನಿಖೆ ನಡೆಸಿದ್ದರು.
ಇದೇ ಪ್ರಕರಣದ ಮತ್ತೊಬ್ಬ ತನಿಖಾಧಿಕಾರಿ, ಸದ್ಯ ವಿಜಾಪುರ ಡಿವೈಎಸ್ಪಿಯಾಗಿರುವ ಎಂ.ವಿ. ಜ್ಯೋತಿ ಶುಕ್ರವಾರ ಕೋರ್ಟ್ ಎದುರು ಸಾಕ್ಷಿ ಹೇಳಲಿದ್ದಾರೆ. ನ್ಯಾಯಾಧೀಶರಾದ ಗೋಪಾಲಕೃಷ್ಣ ಕೊಳ್ಳಿ ವಿಚಾರಣೆ ಆಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com